ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಹೇಮನಾಳ ಗ್ರಾಮ ಪಂಚಾಯತ್ ಪಿಡಿಓ ಪಂಚಾಯತಿಗೆ ಬಾರದೆ, ಸಾರ್ವಜನಿಕರಿಗೆ ಸಿಗದೇ ಕಾಲಹರಣ ಮಾಡುತ್ತಾ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಕೂಡಲೇ ಇವರನ್ನು ಅಮಾನತು ಮಾಡಿ ಇಲ್ಲವೇ ವರ್ಗಾವಣೆ ಮಾಡಿ ಎಂದು ತಹಶೀಲ್ದಾರ್ ಪರಶುರಾಮ ಅವರಿಗೆ ಗ್ರಾಮಸ್ಥರು ಒತ್ತಾಯಿಸಿದರು.
“ಗ್ರಾಮ ಪಂಚಾಯತಿಯಲ್ಲಿ ಸುಮಾರು 10 ವರ್ಷಗಳಿಂದ ಚುನಾವಣೆ ನಡೆಯದೆ, ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಬೀದಿ ದೀಪ, ಕನಿಷ್ಟ ಮೂಲ ಸೌಲಭ್ಯ ಮರೀಚಿಕೆಯಾಗಿದೆ. ಅಭಿವೃದ್ಧಿಗಾಗಿ ಸರ್ಕಾರದಿಂದ ಪಂಚಾಯತಿಗೆ ಬರುವ ಕೋಟಿಗಟ್ಟಲೆ ಅನುದಾನ ಪಿಡಿಒ ರವರ ಜೇಬಿಗೆ ಸೇರುತ್ತಿದೆ. ಉದ್ಯೋಗ ಖಾತ್ರಿ 15ನೇ ಹಣಕಾಸಿನ ಕಾಮಗಾರಿ ನಡೆಯದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಭ್ರಷ್ಟ ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈತನ ಸರ್ವಾಧಿಕಾರಕ್ಕೆ ಕೂಡಲೇ ತಡೆಯೊಡ್ಡಲು ಉನ್ನತ ಅಧಿಕಾರ ವರ್ಗ ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.
ಕುಡಿಯುವ ನೀರಿನ ಕೊರತೆ, ರಸ್ತೆಗಳ ಮೇಲೆ ಚರಂಡಿ ನೀರು, ಹಳ್ಳಿಗಳಲ್ಲಿ ದುರ್ವಾಸನೆ ಹೆಚ್ಚಾಗಿ ಸೊಳ್ಳೆಗಳ ಸಹವಾಸದಿಂದ ಜನ ರೋಗಗಸ್ಥರಾಗಿದ್ದಾರೆ. ಜನ ಸಾಮಾನ್ಯರು ಪಿಡಿಒಗೆ ಸಮಸ್ಯೆ ಹೇಳಿಕೊಳ್ಳಲು ಅವರು ಪಂಚಾಯತಿಗೇ ಬರಲು ಸಿದ್ಧರಿಲ್ಲ. ಒಂದು ವೇಳೆ ಅವರು ಬಂದೂ ಸಮಸ್ಯೆ ಹೇಳಿಕೊಂಡರೆ ಕಡೇಪಕ್ಷ ಸರಿಯಾಗಿ ಸ್ಪಂದಿಸದೆ ಇರುವುದು ದುರಂತ. ಗ್ರಾಮಸ್ಥರು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ತಕ್ಷಣ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. ಮಾಡದಿದ್ದರೆ ಹೇಮನಾಳ ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕುಡಿಯುವ ನೀರಿಗೆ ಪರದಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಈ ವೇಳೆ ನಾಗರಾಜ ಖಾನಾಪೂರು, ಶಾಂತಕುಮಾರ ಹೊನ್ನಟಗಿ, ಮೂರ್ತಿ ನಾಯಕ ಹೇಮನಾಳ, ಬಸವರಾಜ ಬೊಮ್ಮನಾಳ, ಬಸಲಿಂಗಪ್ಪ ನಾಗವಂಶಿ ಬೊಮ್ಮನಾಳ್, ಬಸಲಿಂಗಪ್ಪ ಖಾನಾಪೂರು, ಬನ್ನಪ್ಪ ಬಸವಂತಪೂರು, ಹನುಮಂತ ನಾಯಕ ಹೇಮನಾಳ್, ಜಾಕೋಬ್ ಬೊಮ್ಮನಾಳ, ಶಿವುಪುತ್ರ ಹೇಮನಾಳ್, ಮಾಳಪ್ಪ ಕೊಳೂರು, ನಿಂಗಯ್ಯ ಬೊಮ್ಮನಾಳ್, ಹುಲಿಗಪ್ಪ ಹೊನ್ನಟಗಿ, ಮಾರೆಪ್ಪ ಹೊನ್ನಟಗಿ ಇನ್ನಿತರರು ಇದ್ದರು.
