ರಾಯಚೂರು ನಗರದ ದೇವರಾಜು ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ಹಾಗೂ ಗುಂಪುಗಾರಿಕೆ ಮಾಡುತ್ತಿರುವ ನಿಲಯದ ಮೇಲ್ವಿಚಾರಕಿ ಗಿರಿಜಾ ಮಾಲಿ ಪಾಟೀಲ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ವಸತಿ ವಿದ್ಯಾರ್ಥಿಗಳು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
“ರಾಯಚೂರು ನಗರದ ಜೋಳಮಾನದೊಡ್ಡಿ ರಸ್ತೆಯ ವಸತಿ ನಿಲಯದ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ಗಿರಿಜಾ ಮಾಲಿ ಪಾಟೀಲ ಅವರನ್ನು ವಸತಿ ನಿಲಯದ ವಿದ್ಯಾರ್ಥಿನಿಯರು ಮೂಲ ಸೌಕರ್ಯ ಕೇಳಿದರೆ, ದಿನನಿತ್ಯ ಮಾನಸಿಕವಾಗಿ ಕಿರುಕುಳ, ಹೊರಗಿನವರಿಂದ ಅಥವಾ ವಿದ್ಯಾರ್ಥಿನಿಯರಲ್ಲೇ ಗುಂಪುಗಾರಿಕೆಯನ್ನು ಮಾಡುವುದು, ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿಸುವ ಪ್ರಯತ್ನ ಎಸಗಿರುತ್ತಾರೆ. ನಿಲಯದ ವಿದ್ಯಾರ್ಥಿನಿಯರಿಗೆ ಭಯದ ವಾತಾವರಣ ಸೃಷ್ಟಿಸಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಸಮಸ್ಯೆ ಉಂಟಾಗುತ್ತಿದೆ. ನಿಲಯದ ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು” ಎಂದು ವಿದ್ಯಾರ್ಥಿ ಒಕ್ಕೂಟ ಒತ್ತಾಯಿಸಿದೆ.
“ಮೇಲ್ವಿಚಾರಕಿ ವಿರುದ್ದ ಕ್ರಮ ಜರುಗಿಸದೆ ನಿರ್ಲಕ್ಷ್ಯ ಧೋರಣೆ ತೋರಿದರೆ ವಸತಿ ನಿಲಯಗಳನ್ನು ಬಹಿಷ್ಕರಿಸಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ವಸತಿ ನಿಲಯದ ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ; ದಲಿತರಿಗೆ ಹೋಟೆಲ್, ಸಲೂನ್‌ಗಳಿಗಿಲ್ಲ ಪ್ರವೇಶ
“ಮೇಲಧಿಕಾರಿಗಳು ವಿದ್ಯಾರ್ಥಿನಿಯರಿಗೆ ಕೂಡಲೇ ಸೂಕ್ತ ನ್ಯಾಯ ಒದಗಿಸಿ ಅಲ್ಲಿರುವಂತಹ ಮೇಲ್ವಿಚಾರಕಿಯನ್ನು ಅಮಾನತು ಮಾಡಬೇಕು. ಮುಂದಿನ ದಿನಗಳಲ್ಲಿ ವಸತಿ ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಲ್ಲೆ ಇತರ ಘಟನೆಗಳು ನಡೆದರೆ ಮೇಲಧಿಕಾರಿಗಳೇ ನೇರ ಕಾರಣ” ಎಂದರು.
ಈ ವೇಳೆ ಹಿಂದುಳಿದ ವರ್ಗಗಳ ಸಂಘದ ರಾಜ್ಯಾಧ್ಯಕ್ಷ ತಿಮ್ಮಪ್ಪ ಕರ್ಣ, ನಾಗರಾಜ್, ಆಂಜನೇಯ, ಬಷೀರ್ ಅಹ್ಮದ ಸೇರಿದಂತೆ ಇನ್ನಿತರರು ಇದ್ದರು.