ಸಂವಿಧಾನ ಪೂರ್ವ ಭಾರತ ದೇಶದಲ್ಲಿ ಮಹಿಳೆಯರು ಪುರುಷನ ಅಧೀನದಲ್ಲಿ ಗುಲಾಮಳಾಗಿ, ಅಸಹಾಯಕಿಯಾಗಿ ಎರಡನೇ ದರ್ಜೆಯಾಗಿ ಬದುಕಬೇಕಾಗಿತ್ತು ಹಾಗೂ ಮೇಲ್ವರ್ಗದ ಜನರ ಮುಂದೆ ಕೆಳವರ್ಗದ ಸಮುದಾಯಗಳು ಜೀತದಾಳಾಗಿ ದುಡಿಯಬೇಕಿತ್ತು.ಇದನ್ನು ಹೋಗಲಾಡಿಸಲು ನೊಂದ ಸಮುದಾಯಗಳಿಗೆ ಅಧಿಕಾರ ಹಿಡಿಯಲು ನಿಜವಾದ ಸ್ವಾತಂತ್ರ್ಯ ತಂದುಕೊಟ್ಟವರು ಅಂಬೇಡ್ಕರ್ ಎಂದು ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವಿ ಲೊಯೋಲ ವಿದ್ಯಾಸಂಸ್ಥೆಗಳಿಂದ ಆಯೋಜಿಸಿದ್ದ, ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ ಜಯಂತ್ಯೋತ್ಸವ ಅಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿಚಾರ ಮಂಡಿಸಿದರು.
ದಲಿತ, ಹಿಂದುಳಿದವರು ಕುಲ ಕಸುಬುಗಳನ್ನು ಮಾಡುತ್ತಾ ಮೇಲ್ಜಾತಿಯವರ ಆದೇಶದಂತೆ ಅವರಿಗೆ ವಿಧೇಯರಾಗಿ ಬದುಕಬೇಕು ಒಂದು ವೇಳೆ ನಿಯಮ ಮೀರಿದರೆ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು. ಮಹಿಳೆಯರು, ದಲಿತರು, ಹಿಂದುಳಿದ ಸಮುದಾಯದ ಜನರು ತಮಗೆ ಇಷ್ಟದಂತೆ ಬದುಕಲು, ಉದ್ಯೋಗ ಮಾಡಲು, ಹಕ್ಕು ಅಧಿಕಾರಗಳನ್ನು ಪಡೆಯಲು ಸಂವಿಧಾನ ಮೂಲಕ ಕಾನೂನು ಮಾಡಿ ಸಮಾನವಾಗಿ ಹಕ್ಕು ಪಡೆಯಲು ನೀಡಿದವರು ಅಂಬೇಡ್ಕರ ಅವರು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಳಿ ಮಳೆಗೆ ಬೆಳೆ ಹಾನಿ; ಪರಿಹಾರ ನೀಡಲು ಒತ್ತಾಯ
ಬಾಬಾಸಾಹೇಬ್ ಅಂಬೇಡ್ಕರ್ ರವರ ಹೋರಾಟ, ಚಳುವಳಿಯನ್ನು ವಿದ್ಯಾರ್ಥಿಗಳು, ಯುವಜನತೆ, ನೌಕರ ವರ್ಗ, ಶೋಷಿತ ಸಮುದಾಯಗಳ ರಾಜಕಾರಣಿಗಳು ಮುಂದುವರೆಸಬೇಕಾಗಿದೆ. ಬಹುಜನರು ರಾಜಕೀಯ ಅಧಿಕಾರ ಪಡೆಯುವ ಮೂಲಕ ಸಂವಿಧಾನ ಜಾರಿಮಾಡುವ ಜಾಗಕ್ಕೆ ಬಂದು ಅಂಬೇಡ್ಕರ್ ರವರ ಕನಸು ನನಸು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರ ಮಾನವಿ ನಿರ್ದೇಶಕರಾದ ಫಾದರ್ ಡಾಮ್ ಪ್ರೇಮ್ ಲೋಗೊ, ಜೇವಿಯರ್ ಶಾಲೆ ಮುಖ್ಯಸ್ಥರಾದ ಫಾದರ್ ವಿಲ್ಸನ್ ಬೆನ್ನಿಸ್, ಲೊಯೋಲ ಸಮಾಜ ಸೇವಾ ಕೇಂದ್ರ ಸದಸ್ಯರಾದ ರವೀಂದ್ರ ಜಾನೇಕಲ್ , ಲೊಯೋಲ ಪಿಯು ಕಾಲೇಜ್ ಮುಖ್ಯಸ್ಥರಾದ ಫಾದರ್ ಪ್ರವೀಣ್ ರಾಜ್, ಸೇವಾಕೇಂದ್ರ ಸದಸ್ಯ ಮರಿಯಪ್ಪ, ವಿಜಯಲಕ್ಷ್ಮೀ,ಶಶಿಕಲಾ , ಲೊಯೋಲ ವಿದ್ಯಾಸಂಸ್ಥೆಗಳ ಸಿಬ್ಬಂದಿವರ್ಗ, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
