ಮಹಿಳೆಯರಿಗೆ ದುಡಿಯುವ-ಹಣ ಗಳಿಸುವ ಹಕ್ಕು ನೀಡಿದವರು ಅಂಬೇಡ್ಕರ್ ಎಂದು ಕಾರಟಿಗಿ ಸಿಎಂಎನ್ ಕಾಲೇಜಿನ ಉಪನ್ಯಾಸಕ ಈಶ್ವರ ಹಲಗಿ ಹೇಳಿದರು.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ರೇಣುಕಮ್ಮ- ಮೌನೇಶ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, ʼ79ನೇ ಮನೆ-ಮನೆಗೆ ಅಂಬೇಡ್ಕರ್ʼ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಾಯಿ, ಹಂದಿಗಿಂತ ಕೀಳಾಗಿ ಬದುಕುತ್ತಿದ್ದ ಮಹಿಳೆಯರಿಗೆ ಅಕ್ಷರ ಕಲಿಯುವ ಹಕ್ಕು, ಆಸ್ತಿ ಹೊಂದುವ ಹಕ್ಕು, ವೈವಾಹಿಕ ಜೀವನದಲ್ಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ತಿರಸ್ಕರಿಸುವ ಹಕ್ಕುಗಳು ಸೇರಿದಂತೆ ಹಲವು ಹಕ್ಕು ಅಧಿಕಾರಗಳನ್ನು ನೀಡಿದವರು ಬಾಬಾಸಾಹೇಬ್ ಅಂಬೇಡ್ಕರ್” ಎಂದು ಹೇಳಿದರು.
“ದಲಿತರು ಜಾತಿ ಮತ್ತು ಸಂಪ್ರದಾಯದ ಸಂಕೋಲೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಮೇಲ್ಜಾತಿಯ ಕೆಲವು ವರ್ಗಗಳು ಇವರ ಮೆದುಳಿಗೆ ಮತ್ತು ಮನಸ್ಸಿಗೆ ಹಾಕಿದ ಬೇಡಿಯನ್ನು ಕಳಚಿಕೊಳ್ಳಬೇಕಾಗಿದೆ. ಮೌಢ್ಯತೆಯಿಂದ ಹೊರಬರಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆ ಮತ್ತು ವಿಚಾರಗಳ ಅರಿವನ್ನು ಮಕ್ಕಳಿಗೆ ತಿಳಿಸಬೇಕು” ಎಂದರು.
ಕರ್ನಾಟಕ ಜನಶಕ್ತಿ ಮುಖಂಡ ಶಿವಪುತ್ರಪ್ಪ ತುರ್ವಿಹಾಳ ಮಾತನಾಡಿ, “ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಪಾರ ಜ್ಞಾನ ಸಂಪಾದಿಸಲು ಮತ್ತು ಶೋಷಿತರಿಗೆ ಸಮಾನತೆಯಿಂದ, ಸ್ವಾತಂತ್ರ್ಯದಿಂದ ಬದುಕುವ ಹಕ್ಕಗಳನ್ನು ನೀಡುವುದಕ್ಕೆ ಹೋರಾಟ ಮಾಡಲು ರಮಾಬಾಯಿ ಅವರು ಮಾಡಿದ ತ್ಯಾಗ ಸಹಕಾರ ಬಹಳ ದೊಡ್ಡದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೆಎಸ್‌ಆರ್‌ಟಿಸಿ ನಿಲ್ದಾಣಾಧಿಕಾರಿ ಅಮಾನತು
ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ ಶರಣಪ್ಪ ಬಲ್ಲಟಗಿ, ಹಿರಿಯ ಹೋರಾಟಗಾರ, ದಸಂಸ ಮಹಾಪೋಷಕ ಎಂ ಆರ್ ಭೇರಿ, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಸಿಂಧನೂರು ಸಂಚಾಲಕ ಮೌನೇಶ ಉಮಲೂಟಿ, ನಾಗರಾಜ, ಶಾಮ್ ಮುಳ್ಳೂರು, ಮಾಬುಶುಭಾನಿ ಚಲುವಾದಿ, ನಾಗರಾಜ, ದುರುಗೇಶ, ಹುಲುಗಪ್ಪ, ಬಸವರಾಜ, ಮರಿಯಪ್ಪ, ದೊಡ್ಡಮ್ಮ ರೇಣುಕಮ್ಮ, ಅಡಿವೆಪ್ಪ, ಮರಿಯಮ್ಮ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
ವರದಿ : ಬಸವರಾಜ್ ಬಾದರ್ಲಿ