ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಅಮಲೇರಿಸುವ ಪದಾರ್ಥಗಳ ಮಾರಾಟ ಜಾಲ ಹಬ್ಬುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಿತಿಮೀರಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕೆಂದು ಅಬಕಾರಿ ಇಲಾಖೆಗೆ ಮಾದಕ ವ್ಯಸನ ನಿರ್ಮೂಲನೆ ಸಮಿತಿ ಮನವಿ ಸಲ್ಲಿಸಿತು.
ಸಿಂಧನೂರು ತಾಲೂಕಿನಲ್ಲಿ ಇತ್ತೀಚೆಗೆ ಗಾಂಜಾ, ಡ್ರಗ್ಸ್ ಸೇರಿದಂತೆ ಆಮಲೇರಿಸುವ ಪದಾರ್ಥಗಳ ಮಾರಾಟ ಜಾಲ ಹಬ್ಬುತ್ತಿದ್ದು, ಇದರಿಂದ ಯುವಕರು ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಹೋರಾಟಗಾರ ಬಸವರಾಜ್ ಬಾದರ್ಲಿ ಮಾತನಾಡಿ, “ಗ್ರಾಮೀಣ ಪ್ರದೇಶದ ಕೆಲ ಕ್ಯಾಂಪ್ ಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇನ್ನು ನಗರದ ವಾರ್ಡ್ ವೊಂದರಲ್ಲಿ ಮಾದಕ ವಸ್ತುಗಳು ಮಾರಾಟ ಮಾಡುವ ಜಾಲಗಳು ಇವೆ ಎಂಬ ಬಗ್ಗೆ ಅನುಮಾನಗಳಿವೆ. ಅಂತಾರಾಜ್ಯ ಮಟ್ಟದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರೊಂದಿಗೆ ಲಿಂಕ್ ಹೊಂದಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲವರು, ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಇನ್ನು ಸಿಂಧನೂರು ನಗರ ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ಇಲ್ಲಿಗೆ ಹೊರ ರಾಜ್ಯದಿಂದ ವ್ಯಾಪಾರದ ಸೋಗಿನಲ್ಲಿ ಬರುವ ಹಲವರು ಅತಿ ಸುಲಭವಾಗಿ ಹಣ ಮಾಡಲು ಗಾಂಜಾ, ಡ್ರಗ್ಸ್ ಸೇರಿದಂತೆ ಇನ್ನಿತರೆ ಆಮಲೇರಿಸುವ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದಾರೆ. ಇದಕ್ಕೆ ಸ್ಥಳೀಯ ಕೆಲವರ ಸಾಥ್ ಕೂಡಾ ಇರುವ ಬಗ್ಗೆ ಸಾಕಷ್ಟು ಸಂಶಯಗಳಿವೆ. ಗಾಂಜಾ, ಸಿಂಥೆಟಿಕ್ಸ್ ಡ್ರಗ್ಸ್ ಮಿಶ್ರಿತ ಚಾಕ್‌ಲೇಟ್, ಚೂಯಿಂಗ್‌ಗಮ್, ಗುಳಿಗೆಗಳು, ಸಿಹಿ ಪದಾರ್ಥಗಳು, ಇಂಜೆಕ್ಷನ್, ಪೌಡರ್ ಸೇರಿದಂತೆ ಇನ್ನಿತರೆ ಹಲವು ಬಗೆಯ ಮಾದಕ ವಸ್ತುಗಳ ಮಾರಾಟ ಜಾಲ ನಿರಂತರವಾಗಿ ತನ್ನ ಅಕ್ರಮ ಚಟುವಟಿಕೆಗಳನ್ನು ದಿನದಿಂದ ದಿನಕ್ಕೆ ತಾಲೂಕಿನಲ್ಲಿ ವ್ಯಾಪಕಗೊಳಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪ್ರತ್ಯೇಕ ಮೊಬೈಲ್ ಆ್ಯಪ್, ಸೊಷಿಯಲ್ ಮೀಡಿಯಾ ಹಾಗೂ ಕೆಲ ಗಾಂಜಾ, ಡ್ರಗ್ಸ್ ಪೆಡ್ಡರ್‌ಗಳ ಮೂಲಕ ಸಿಟಿ ಸೇರಿದಂತೆ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿರುವ ವ್ಯಸನಿಗಳಿಗೆ ಮಾದಕ ವಸ್ತುಗಳು ತಲುಪುತ್ತಿರುವುದು, ಯಾರಿಗೂ ಗೊತ್ತಾಗದಂತೆ ಆಟಿಕೆ ಸಾಮಗ್ರಿ, ಉಡುಪುಗಳು, ವೈದ್ಯಕೀಯ ಉಪಕರಣಗಳು, ಕಚ್ಚಾವಸ್ತುಗಳು ಸೇರಿದಂತೆ ಇನ್ನಿತರೆ ಸರಕು-ಸಾಮಗ್ರಿಗಳ ವಾಹನಗಳಲ್ಲಿ ಗಾಂಜಾ, ಡ್ರಗ್ಸ್, ಅಮಲೇರಿಸುವ ಪದಾರ್ಥಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಪೊಲೀಸ್ ಇಲಾಖೆಯವರು ಪತ್ತೆಹಚ್ಚಿ ಕ್ರಮ ಜರುಗಿಸಬೇಕು” ಎಂದರು.
“ಮಾದಕ ವ್ಯಸನದ ಗೀಳು ಅಪರಾಧಿ ಚಟುವಟಿಕೆಗಳಿಗೆ ಪ್ರಚೋದಿಸುತ್ತದೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ನಿದರ್ಶನಗಳಿವೆ. ಹಾಗಾಗಿ ಸಿಂಧನೂರು ತಾಲೂಕಿನಲ್ಲಿ ಹಬ್ಬುತ್ತಿರುವ ಗಾಂಜಾ, ಡ್ರಗ್ಸ್ ಹಾಗೂ ಅಮಲೇರಿಸುವ ಪದಾರ್ಥಗಳ ಮಾರಾಟದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದರು.
ಇದನ್ನೂ ಓದಿ: ರಾಯಚೂರು | ಮನೆಯ ಬೀಗ ಮುರಿದು ₹2 ನಗದು, 10 ತೊಲ ಬಂಗಾರ ಕಳ್ಳತನ
ಈ ವೇಳೆ ದಾವಲ್ ಸಾಬ್ ದೊಡ್ಮನಿ, ಸುರೇಶ್, ಚಾಂದ್ ಪಾಶ, ಮಂಜುನಾಥ, ಇನ್ನಿತರರು ಹಾಜರಿದ್ದರು.
