ದೇವದಾಸಿ ಮಹಿಳೆಯರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ವತಿಯಿಂದ ರಾಯಚೂರು ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಲಾಯಿತು.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪುರಸಭೆಯ ವ್ಯಾಪ್ತಿಯಲ್ಲಿ 2017ರಲ್ಲಿ ಸರ್ವೇ ನಂಬರ್ 469/2 ಸಂಬಂಧಕ್ಕೆ ಖಾಲಿ ಜಾಗವನ್ನು ದೇವದಾಸಿ ಮಹಿಳೆಯರಿಗೆ ನೀಡಬೇಕು ಎಂದು ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿರುತ್ತಾರೆ. ಅದನ್ನು ಇಲ್ಲಿಯವರೆಗೂ ನೀಡಿಲ್ಲ. ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮುದಗಲ್ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 16 ರಲ್ಲಿ ಸುಮಾರು 15 ದೇವದಾಸಿ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿರುವ ದೇವದಾಸಿ ಮಹಿಳೆಯರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಪರಶುರಾಮ್ ಪೂಜಾರ್, “15 ದೇವದಾಸಿ ಮಹಿಳೆಯರಿಗೆ 2017ರಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಪುರಸಭೆಯಲ್ಲಿ ತೀರ್ಮಾನ ಆಗಿದೆ. ಸುಮಾರು 7 ವರ್ಷ ಕಳೆದರೂ ಪುರಸಭೆ ಇಲಾಖೆ ಹಕ್ಕು ಪತ್ರ ನೀಡುತ್ತಿಲ್ಲ” ಎಂದು ಆರೋಪಿಸಿದರು.
“ದೇವದಾಸಿ ಮಹಿಳೆಯರಲ್ಲಿ ಕೆಲವರು ವಯೋವೃದ್ಧರಾಗಿದ್ದಾರೆ. ಮನೆ ಇಲ್ಲದೆ, ಕೆಲಸವಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟ. ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವರು ದಿನನಿತ್ಯ ಕೂಲಿ ಕೆಲಸ ಮಾಡುತ್ತಾ ಬಾಡಿಗೆ ಮನೆಯ ವೇತನ ಕಟ್ಟಿಕೊಂಡು , ದಿನನಿತ್ಯ ಅಗತ್ಯ ವಸ್ತುಗಳ ಖರೀದಿಸುತ್ತಿದ್ದಾರೆ. ಹಲವು ಸಂಕಷ್ಟಗಳ ನಡುವೆ ಬದುಕು ಸವೆಸುತ್ತಿದ್ದಾರೆ” ಎಂದು ಅಳಲು ತೋಡಿಕೊಂಡರು.
ಇದನ್ನು ಓದಿದ್ದೀರಾ? ಉಡುಪಿ | ಅಮಲು ಪದಾರ್ಥ ನೀಡಿ ಯುವತಿಯ ಅತ್ಯಾಚಾರ ಆರೋಪ: ಇಬ್ಬರ ಬಂಧನ
ತಕ್ಷಣವೇ ಜಿಲ್ಲಾಡಳಿತ ಪ್ರವೇಶ ಮಾಡಿ ದೇವದಾಸಿ ಮಹಿಳೆಯರಿಗೆ ನಿವೇಶನ ಮಂಜೂರು ಮಾಡಬೇಕು. ಪುರಸಭೆ ನಿರ್ಲಕ್ಷ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಹೆಚ್ ಪದ್ಮಾ, ಪರಶುರಾಮ್, ಹುಲಿಗೆಮ್ಮ ಮುದಗಲ್, ಕೆ ಜಿ ವೀರೇಶ್ ಇನ್ನಿತರರು ಹಾಜರಿದ್ದರು.
