ಸರ್ಕಾರಿ ಶಾಲೆಗೆ ಮೀಸಲಿರಿಸಿದ ಖಾಲಿ ನಿವೇಶನವನ್ನು ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಂಡು ಅತಿಕ್ರಮಣ ತೆರವುಗೊಳಿಸಿ ಶಾಲಾ ಕೊಠಡಿ ನಿರ್ಮಿಸಬೇಕು ಎಂದ ಸರ್ಕಾರಿ ಪ್ರೌಢಶಾಲೆ ಎಲ್‌ಬಿಎಸ್ ನಗರದ ಎಸ್‌ಡಿಎಂಸಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರದ ಚಂದ್ರಬಂಡಾ ರಸ್ತೆಯಲ್ಲಿ ಬರುವ ಸರ್ವೆ ನಂ. 384/1ಎ ಸಂತೋಷ ನಗರದ ವಾರ್ಡ್ 28ರಲ್ಲಿ ಬರುತ್ತಿದೆ, 1017.45 ಚದರ ಮೀಟರ್ ನಿವೇಶನ ಜಾಗ ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟು ಆ ಸ್ಥಳದಲ್ಲಿ ಎಲ್‌ಬಿಎಸ್ ನಗರದ ಪ್ರೌಢಶಾಲಾ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ಆಗಿದೆ. ಆದರೆ, ಈ ಬಡಾವಣೆಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡಿ ದೇವರು ಮತ್ತು ದೇವಸ್ಥಾನ ಹೆಸರಿನಲ್ಲಿ ನಿವೇಶನವನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಣ್ಣದಾಗಿ ತಾತ್ಕಾಲಿಕ ಟಿನ್ ಶೆಡ್ಡು ನಿರ್ಮಾಣ ಮಾಡಿಕೊಂಡಿದ್ದು, ಈಗ ಅದೇ ಟಿನ್ ಶೆಡ್ಡನ್ನು ಮಾರ್ಪಾಡು ಮಾಡುವ ಮೂಲಕ ಸರ್ಕಾರಿ ಶಾಲೆಯ ಜಾಗವನ್ನು ಕಬಳಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಲು ಹೊರಟಿದ್ದಾರೆ. ಅದೇ ಬಡಾವಣೆಯಲ್ಲಿ ಈಗಾಗಲೇ ಧಾರ್ಮಿಕ ಉದ್ದೇಶದ ಅಡಿಯಲ್ಲಿ ದೇವಸ್ಥಾನಕ್ಕಾಗಿ ಬೇರೆ ಜಾಗ ಮೀಸಲಿದ್ದು, ಅಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಕನ್ನಡ ಶಾಲೆ ನಿರ್ಮಾಣವಾಗುತ್ತಿದ್ದರೂ ಉರ್ದು ಶಾಲೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಜಾಗ ಕಬಳಿಸುವ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.
ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆಗೆ ಮನವಿ ಸಲ್ಲಿಸಿದೆ, ಯಾವುದೇ ಪ್ರಯೋಜನವಾಗಿಲ್ಲ, ಪ್ರಸ್ತುತ ಸಾಲಿನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಂತ ಕಟ್ಟಡವಿಲ್ಲದೆ ಬೇರೆ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೂಡಲೆ ಟೀನ್ ಶೆಡ್ ತೆರವುಗೊಳಿಸಿ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಅನ್ವರ್ ಪಾಷ, ಕಾಸಿಂ ನಾಯಕ್, ಮಧುಸೂದನ್, ನರಸಿಂಹಲು.ಕೆ, ನರಸಿಂಹಲು ಸೇರಿದಂತೆ ಅನೇಕರು ಇದ್ದರು.