ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಬೆಂಬಲಿಗರಿಂದ ಜಮೀನು ಒತ್ತುವರಿ ಮಾಡಿ ನಿತ್ಯ ದೌರ್ಜನ್ಯ ಎಸಗಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ರಾಜಕೀಯ ಪ್ರಭಾವದಿಂದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸತ್ತು ದೌರ್ಜನ್ಯಕ್ಕೊಳಗಾದ ಕುಟುಂಬ ದಯಾಮರಣ ಕೋರಿ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಧ್ಯರಾತ್ರಿ ಧರಣಿ ನಡೆಸಿತು.
ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದ ಹನುಮಂತ ಎಂಬುವವರ ಕುಟುಂಬ ದಯಾಮರಣ ಕೋರಿ ಧರಣಿ ಕುಳಿತಿದೆ. ಇವರಿಗೆ ಸೇರಿದ ನಿವೇಶನದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರತಾಪಗೌಡ ಬೆಂಬಲಿಗ ದುರ್ಗಾಪ್ರಸಾದ್ ಎಂಬಾತ ದಬ್ಬಾಳಿಕೆ ಮಾಡಿ ನಿವೇಶನದಲ್ಲಿ ಕಸ ಹಾಕಿ ಒತ್ತುವರಿ ಮಾಡಿದ್ದಾನೆ. ಇದನ್ನು ತೆರವುಗೊಳಿಸಲು ಮನವಿ ಮಾಡಿದರೆ ಬೆದರಿಕೆ ಹಾಕುತ್ತಿದ್ದಾನೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದರೂ ರಾಜಕೀಯ ಪ್ರೇರಿತರಾಗಿ ಅಧಿಕಾರಿಗಳು ರಕ್ಷಣೆ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.
ಆರೋಪಿಗಳ ದೌರ್ಜನ್ಯ, ಜೀವ ಬೆದರಿಕೆಯಿಂದ ಬೇಸತ್ತಿದ್ದು, ರಕ್ಷಣೆ ನೀಡಿ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ನಮಗೆ ಸಾಯಲು ಅವಕಾಶ ನೀಡಬೇಕು ಎಂದು ಹನುಮಂತ ತೋರಣದಿನ್ನಿ ಪತ್ನಿ ಮತ್ತು ಮಕ್ಕಳೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಬಳಿಕ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ನೊಂದ ಕುಟುಂಬಸ್ಥರ ಮನ ಒಲಿಸಲು ಪ್ರಯತ್ನಿಸಿದರು. ಅದರೂ ರಾತ್ರಿಯಿಡೀ ಧರಣಿ ನಡೆಸಲಾಯಿತು. ಜಿಲ್ಲಾಧಿಕಾರಿ ಅವರ ಮನವಿ ಆಲಿಸಿ ಸಮಸ್ಯೆ ಪರಿಹಾರಕ್ಕೆ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಎಐಸಿಸಿಟಿಯು ಪ್ರತಿಭಟನೆ
ಮಸ್ಕಿ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದ್ದು, ಪ್ರಸ್ತುತ ಕಾಂಗ್ರೆಸ್‌ನ ಬಸವನಗೌಡ ತುರ್ವಿಹಾಳ ಅವರು ಶಾಸಕರಾಗಿದ್ದಾರೆ. ಅವರು ಪರಿಶಿಷ್ಟರ ಸಮಸ್ಯೆ ಆಲಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
