ಯುದ್ದ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಶುಕ್ರವಾರ ಸಂಜೆ ಮಾಕ್ ಡ್ರಿಲ್ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರದ ಶಕ್ತಿನಗರ ವಿದ್ಯುತ್ ಶಾಖೋತ್ಪನ್ನ ಕೇಂದ್ರ( ಆರ್ ಟಿಪಿಎಸ್ ) ಹೆಲಿಪ್ಯಾಡ್ ಆವರಣದಲ್ಲಿ ಕೇಂದ್ರ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ 10ಕ್ಕೂ ಅಧಿಕ ಇಲಾಖೆಯ ಸಹಯೋಗದಲ್ಲಿ ಮಾಕ್ ಡ್ರಿಲ್ ನೆರವೇರಿತು.
ನೆರೆಹೊರೆಯ ರಾಷ್ಟ್ರಗಳು ಯುದ್ಧ ಘೋಷಿಸಿ ಬಾಂಬ್ ದಾಳಿ ನಡೆದಾಗ ಆರಂಭದಲ್ಲಿ ಜಿಲ್ಲಾಡಳಿತದ ಮೂಲಕ ಸಂದೇಶ ರವಾನೆಯಾಗುತ್ತದೆ. ಬಳಿಕ ದೇಶದ ಕೆಲ ಭಾಗದಲ್ಲಿ ಬಾಂಬ್ ದಾಳಿ ಆಗಿದೆ ಎಂದು ಪಟಾಕಿ ಸಿಡಿಸಿ ಯುದ್ಧದ ಸನ್ನಿವೇಶ ಸೃಷ್ಟಿ ಮಾಡಲಾಯಿತು. ತಕ್ಷಣ ಯಾವ ರೀತಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂಬ ಕಾರ್ಯಚರಣೆ ಮೂಲಕ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿನಗರ ಶಾಖೋತ್ಪನ್ನ ಘಟಕದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಬಾಂಬ್ ದಾಳಿಯಾದ ಬಗ್ಗೆ ಪೊಲೀಸ್ ಇಲಾಖೆ ಇಲಾಖೆಯಿಂದ ನಾಗರಿಕರಿಗೆ ಸೂಚನೆ ನೀಡಿ ಭಯ ಪಡದೆ ಧೈರ್ಯವಾಗಿ ಪರಿಸ್ಥಿತಿ ಎದುರಿಸಿ, ಸೇನೆ ನಿಮ್ಮ ಜೊತೆಗಿದೆ ಎಂದು ಸಂದೇಶ ನೀಡಲಾಯಿತು.

ಯುದ್ಧ ವೇಳೆ ಬಾಂಬ್ ದಾಳಿಯಾಗಿ ಅನೇಕರು ಗಾಯಗೊಂಡು, ಕೆಲವರು ಪ್ರಾಣ ಕಳೆದುಕೊಂಡ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು ಹಾಗೂ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಅಗ್ನಿಶಾಮಕ ದಳ ಬೆಂಕಿ ನಂದಿಸಲು ನಾಗರಿಕರನ್ನು ರಕ್ಷಣೆ ಮಾಡುವುದು, ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿ ತುರ್ತು ಚಿಕಿತ್ಸೆ ನೀಡುವುದು, ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ರವಾನಿಸುವುದು, ನಾಗರಿಕರ ರಕ್ಷಣಾ ಪಡೆಗಳು ಹೇಗೆ ಯುದ್ಧದ ಸಂದರ್ಭದಲ್ಲಿ ಕಾಪಾಡುತ್ತಾರೆ ಎಂದು ಸಾರ್ವಜನಿಕರಿಗೆ ಮನದಟ್ಟಾಗುವಂತೆ ಅಣಕು ಪ್ರದರ್ಶನ ಮಾಡಲಾಯಿತು.
ಅಣಕು ಪ್ರದರ್ಶನ ಬಳಿಕ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಪ್ರತಿಯೊಬ್ಬ ನಾಗರಿಕ ಸೈನಿಕರಂತೆ ಕೆಲಸ ಮಾಡಬೇಕು. ಸಾರ್ವಜನಿಕರು ಭಯಪಡಬಾರದು. ತುರ್ತು ಪರಿಸ್ಥಿತಿ ವೇಳೆ ವಿವಿಧ ಇಲಾಖೆಗಳಿಂದ ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಭದ್ರತಾ ಪಡೆಯ ತಂಡಗಳು ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಮತ್ತು ಎಂತಹದ್ದೇ ಪರಿಸ್ಥಿತಿ ಎದುರಾದರು ಸಹ ಎಲ್ಲರೂ ಸೇರಿ ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಪೂರ್ವ ತಯಾರಿ ಇದಾಗಿದೆ’ ಎಂದು ತಿಳಿಸಿದರು.

‘ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಣುಕು ಪ್ರದರ್ಶನ ಮಾಡಬೇಕು. ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲ, ಭಯ ಇರಬಾರದು. ಜಿಲ್ಲಾಡಳಿತವು ಈಗಾಗಲೇ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ದೇವಸಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐದಾರು ಹಳ್ಳಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ’ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತರಬೇತಿ ನೀಡಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಂಟ್ರೋಲ್ ರೂಮ್ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.

ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಅಪರ ಜಿಲ್ಲಾಧಿಕಾರಿ ಶಿವಾನಂದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ,ತಹಶೀಲ್ದಾರ್ ಸುರೇಶ ವರ್ಮ ಸೇರಿದಂತೆ ಇತರರು ಭಾಗಿಯಾಗಿ ಅಣುಕು ಪ್ರದರ್ಶನ ವೀಕ್ಷಣೆ ಮಾಡಿದರು.ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
