ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮನಲ್ಲ, ಭಾರತೀಯ ರಾಮ. ರಾಮಮಂದಿರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವೆಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ರಾಯಚೂರು ನಗರಕ್ಕೆ ತೆರಳಿದಾಗ ಮಾಧ್ಯಮಗಳೊಂದಿಗೆ ಮಾತನಾಡಿ, “ಶಾಸ್ತ್ರಗಳನ್ನು ನಂಬಿದವರೇ, ಶ್ರೀರಾಮನ ಮಂದಿರ ಪೂರ್ಣವಾಗದೇ ಉದ್ಘಾಟನೆಯಾಗುವುದು ಸೂಕ್ತವಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಬೇರೆಯವರ ಅಭಿಪ್ರಾಯಗಳನ್ನು ಬಿಜೆಪಿ ಗೌವರಿಸುತ್ತಿಲ್ಲ” ಎಂದರು.
“ಕಾಂಗ್ರೆಸ್ನವರು ಅಯೋಧ್ಯ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವದಿಲ್ಲವೆಂದರೆ, ಅವರಿಷ್ಟ. ಭಾಗವಹಿಸಬಹುದು, ಭಾಗವಹಿಸದೇ ಇರಬಹದು. ಅಲ್ಪಸಂಖ್ಯಾರ ಓಲೈಕೆಗೆಂದು, ಹೇಳಲಾಗದು. ಮುಸ್ಲಿಂ ಸಮುದಾಯವರೂ ಕೂಡ ಆಂಜನೇಯ ಸೇರಿದಂತೆ ಇತರೆ ದೇವಾಲಯಗಳಿಗೆ ಹೋಗುತ್ತಾರೆ. ಅದು ಅವರ ನಂಬಿಕೆಯಾಗಿದೆ. ಭಾರತೀಯ ರಾಮನಿಗೆ ಎಲ್ಲರೂ ಬೇಕು. ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ” ಎಂದರು.
ಶೇಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಂಘಟಿತವಾಗುತ್ತಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಹೆಸರುಗಳಿಂದ ಕರೆಯಲ್ಪಡುವ ಕುರುಬರನ್ನು ಒಂದೇ ವೇದಿಕೆಯಲ್ಲಿ ಬರುವ ಮೂಲಕ ಜನಶಕ್ತಿ ರಾಜಕೀಯ ಶಕ್ತಿಯಾಗಿ ಮಾರ್ಪಡಿಸುವ ಅವಶ್ಯಕತೆಯಿದೆ. ಸರಿ ಸುಮಾರು 12 ಕೋಟಿ ಮಂದಿ ಕುರುಬರು ದೇಶದಲ್ಲಿದ್ದಾರೆ. ಭಾರತ ಮೂಲನಿವಾಸಿಗಳಾದ ಕುರುಬರು ಚರಿತ್ರಯೆನ್ನು ಯುವಪೀಳಿಗೆಗೆ ತಿಳಿಸುವ ಕೆಲಸ ನಡೆಯತ್ತಿದೆ. ಸಮಾಜ ಶಕ್ತಿಯಾಗಿ ರೂಪಗೊಂಡರೆ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತದೆ” ಎಂದರು.
“ಕುರುಬರ ಕುರಿಗಳು ಅಪಘಾತದಲ್ಲಿ ಮೃತಪಟ್ಟರೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಗಳ ಗಮನಕ್ಕೆ ತರಲಾಗಿದೆ. ತೆಲಂಗಾಣ ಮಾದರಿಯಲ್ಲಿಯೂ ಕುರಿಗಾಹಿಗಳಿಗೆ ಯೋಜನೆ ರೂಪಿಸಬೇಕಿದೆ. 1972ರಲ್ಲಿ ದೇವರಾಜ ಅರಸು ಕುರಿ ಮಂಡಳಿ ಸ್ಥಾಪಿಸಿದ್ದರು. ಆದರೆ ನಂತರ ಬಂದ ಎಲ್ಲ ಸರ್ಕಾರಗಳು ನಿರ್ಲಕ್ಷಿಸಿವೆ” ಎಂದರು.
“ಕಾಂತರಾಜ ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ಜಾತಿ ಜನಗಣತಿಗೆ ಮುಂದುವರಿದ ಜಾತಿಗಳು ಅಡ್ಡಿಯಾಗಬಾರದು. ಜಾತಿ ಗಣತಿಯ ವರದಿಯಲ್ಲಿ ಏನಿದೆ ಎಂಬುದನ್ನು ತಿಳಿಯಬೇಕು. ತಿಳಿಯದೇ ವಿರೋಧಿಸುತ್ತಿರುವುದು ಸರಿಯಲ್ಲ” ಎಂದರು.
ಜಾತಿಗಣತಿ ಯಾರು ನೋಡಿದಿರಾ ಎಂದು ಪ್ರಶ್ನಿಸಿದ ಅವರು, “ಹಾವನೂರು ವರದಿ ಬಂದಾಗಲೂ ಇದೇ ರೀತಿ ವಿರೋಧವಾಗಿತ್ತು. ಆದರೆ ಅದು ಜಾರಿಯಾಯಿತು. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರೇ ಜಾತಿ ಗಣತಿ ಮಾಡಿಸಿದ್ದಾರೆ. ಇದೀಗ ಅವರು ಸಿಎಂ ಆಗಿದ್ದಾರೆ. ಅದನ್ನೂ ಸ್ವೀಕಾರ ಮಾಡಬೇಕು, ಸಾಧಕ ಬಾಧಕಗಳ ಕುರಿತು ಚರ್ಚೆಗೆ ಬಿಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಯಾರೂ ನೋಡದೆ ಊಹಾಪೋಹಗಳಿಗೆ ಕಿವಿಗೊಡಬಾರದು. ಆರ್ ಅಶೋಕ, ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಸಮೀಕ್ಷೆ ನೋಡಿದ್ದಿರಾ, ಸುಮ್ಮನೆ ಮಾತನಾಡುವುದು ಸರಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಹುದ್ದೆಗೆ 20-30 ಲಕ್ಷ ಲಂಚ ಪಡೆದ ಭ್ರಷ್ಟ ಶಾಸಕ ನಂಜೇಗೌಡ ರಾಜೀನಾಮೆ ನೀಡಬೇಕು: ಎಎಪಿ ಒತ್ತಾಯ
“ಅನಾವಶ್ಯಕವಾದ ಹೇಳಿಕೆ ಸಲ್ಲದು, ಸರ್ಕಾರಿ ಶಾಲೆ ಶಿಕ್ಷಕರೇ ಮನೆ ಮನೆಗೆ ತೆರಳಿ ಜಾತಿಗಣತಿ ಮಾಡಿದ್ದಾರೆ. ಅವರೇ ಮತದಾರರ ಪಟ್ಟಿ ಮಾಡಿದ್ದಾರೆ. ಆದರೆ ಅದು ಸರಿ ಇದೆಯಾ, ಎಲ್ಲ ಜಾತಿ ಜನಾಂಗಗಳ ಸಮಿಕ್ಷೆ ನಡೆಸಿದ್ದು, ಕಾಂತರಾಜ ವರದಿಯನ್ನು ಸರ್ಕಾರ ಸ್ವೀಕಾರ ಮಾಡಬೇಕು” ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ರಾಜ್ಯಾಧ್ಯಕ್ಷ ನಾಗರಾಜ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಲತಾ, ಬಾಬು ಗದ್ದಿನಮನಿ ಸೇರಿದಂತೆ ಬಹುತೇಕ ಮುಖಂಡರುಗಳಿದ್ದರು.
ವರದಿ : ಹಫೀಜುಲ್ಲ