ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಏಪ್ರಿಲ್ 14ರಂದು ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ. ಇದು ಅಂಬೇಡ್ಕರ್ ತಾತ್ವಿಕತೆಗೆ ವಿರುದ್ಧವಾದ ಮತ್ತು ತಳಸಮುದಾಯದ ಆಹಾರ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನವಾಗಿದೆ. ಕೂಡಲೇ ನಿಷೇಧವನ್ನು ರದ್ದು ಮಾಡಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಅಧಿಕಾರಿಗಳ ಕ್ರಮವನ್ನು ಖಂಡಿಸಿರುವ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, “ಧರ್ಮದ ಹೆಸರಿನಲ್ಲಿ ಎಲ್ಲ ಜನ್ಮದಿನಗಳನ್ನು ಬ್ರಾಹ್ಮಣೀಕರಣ ಮಾಡಲಾಗುತ್ತಿದೆ. ರಾಷ್ಟ್ರ ನಾಯಕರ ದಿನಾಚರಣೆಗಳಂದು ಮಾಂಸ ಮಾರಾಟ ನಿಷೇಧ ಮಾಡಿರುವುದು ಜನಸಾಮಾನ್ಯರ ಆಹಾರ ಪದ್ದತಿಯ ಮೇಲೆ ಸವಾರಿ ಮಾಡಿದಂತೆಯೇ ಸರಿ. ಕೆಲಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಹಿಡನ್ ಅಜೆಂಡಾದ ಕಾರ್ಯ ಸಾಧನೆಗೋಸ್ಕರ ಇಂತಹ ಅವೈಜ್ಞಾನಿಕ ಪದ್ದತಿಗಳನ್ನು ಜನರ ಮೇಲೆ ಬಲವಂತವಾಗಿ ಹೇರಲು ಮುಂದಾಗುತ್ತಿದ್ದಾರೆ, ಇದು ಖಂಡನೀಯ” ಎಂದರು.
:ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಆಹಾರದ ಹಕ್ಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗಾಗಲೇ ಅಂಬೇಡ್ಕರ್ ಜಯಂತಿಯಂದೂ ಕೂಡ ಮಾಂಸ ಮಾರಾಟ ನಿಷೇಧ ಮಾಡಲು ಮುಂದಾಗಿರುವುದು ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ಆಶಯಗಳಿಗೆ ವಿರುದ್ದವಾದುದು” ಎಂದು ಹೇಳಿದರು.
“ಅಂಬೇಡ್ಕರ್ ಎಲ್ಲೂ ಕೂಡ ಅವರ ಬರಹ ಅಥವಾ ಭಾಷಣಗಳಲ್ಲಿ ಮಾಂಸ ಸೇವಿಬಾರದು ಎಂದು ಉಲ್ಲೇಖಿಸಿಲ್ಲ. ದಲಿತರ ಎಲ್ಲ ಆಚರಣೆಗಳಲ್ಲೂ ಮಾಂಸ ಆಹಾರ ಇರಬೇಕು. ಹೀಗಿದ್ದಾಗ ದಲಿತರ ಆಹಾರ ಪದ್ದತಿಯೂ ಪುರೋಹಿತಶಾಹಿ ವ್ಯವಸ್ಥೆಯಡಿ ತರಲು ಮುಂದಾಗಿರುವುದು ದಬ್ಬಾಳಿಕೆಯ ಪರಮಾವಧಿಯನ್ನು ತೋರಿಸುತ್ತದೆ. ಹೀಗಾಗಿ ಡಾ. ಅಂಬೇಡ್ಕರ್ ಅವರ ಮೇಲೆ ನಿಜವಾದ ಕಾಳಜಿ ಇದ್ದರೆ ಸಂಪೂರ್ಣ ಮದ್ಯಪಾನ ನಿಷೇಧ ಜಾರಿ ಮಾಡಲಿ” ಎಂದು ಆಗ್ರಹಿಸಿದರು.