ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕಿಗಾಗಿ ನಡೆದ ಹೋರಾಟಕ್ಕೆ ಮಣಿಸಿದ್ದ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ನಂತರ ಬಂದ ಸರ್ಕಾರಗಳ ನಿರ್ಲಕ್ಷ್ಯದಿಂದ ಸಮಿತಿಯೂ ಮೂಲೆ ಗುಂಪಾಯಿತು. ಈಗ ಸಮಿತಿ ಮತ್ತೆ ಜೀವ ತುಂಬಬೇಕು. ಅದಕ್ಕಾಗಿ ಸರ್ಕಾರವನ್ನು ಒತ್ತಾಯಿಸಿ ಆಗಸ್ಟ್ 14-15 ನಡುವಿನ ರಾತ್ರಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯು ‘ಬರೀ ಹೊಟ್ಟೆ ಸತ್ಯಾಗ್ರಹ’ ಆಯೋಜಿಸಿದೆ ಎಂದು ಹೋರಾಟ ಸಮಿತಿ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಈ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದೊರೆಸ್ವಾಮಿ ಅವರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಕೆಗಾಗಿ ಮತ್ತೊಮ್ಮೆ ಹೋರಾಟಗಾರರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಬೇಕು” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದು ಫಾರಂ 57 ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರು. ಆದರೆ, ನಂತರ ಅದು ನಿಂತು ಹೋಯಿತು. ಸುಮಾರು ವರ್ಷಗಳಿಂದ ಭೂಮಿ, ವಸತಿ ಇಲ್ಲದವರು ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ನಿರ್ಲಕ್ಷಿಸುತ್ತಾ ಬಂದಿವೆ. ಇಲ್ಲಿಯವರಗೆ ಕಾದು ಸಾಕಾಗಿದೆ. ಈಗ ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಮುಂದಾಗಿದ್ದೇವೆ” ಎಂದು ಹೇಳಿದ್ದಾರೆ.
ಹೋರಾಟ ಸಮಿತಿಯ ಮುಖಂಡ ಎಂ.ಆರ್ ಭೇರಿ ಮಾತನಾಡಿ, “ಕಳೆದ 45 ವರ್ಷಗಳಿಂದ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿ ಹಕ್ಕು ನೀಡದೇ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ ಹಾಗೂ ಸರ್ಕಾರ ಭೂಮಿ ಉಳುಮೆ ಮಾಡುವರರಿಗೆ ಭೂಮಿ ಹಕ್ಕು ನೀಡಬೇಕು. ನಗರ ಪ್ರದೇಶದಲ್ಲಿ 94 ಸಿಸಿ ಅರ್ಜಿ ಹಾಕಿದವರಿಗೆ ನಿವೇಶನ ನೀಡುವ ಸೇರಿ ಹಸಿದವರಿಗೆ ಅನ್ನಭಾಗ್ಯ ನೀಡಿದಂತೆ, ಭೂಮಿ ಇಲ್ಲದವರಿಗೆ ಭೂಮಿ ಗ್ಯಾರಂಟಿ ನೀಡಬೇಕು” ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಹೋರಾಟಗಾರ ಭೀಮಣ್ಣ ನಗನೂರು, ಖಾಜಾ ಅಸ್ಲಂ ಪಾಷಾ, ಆಂಜಿನೇಯ್ಯ ಕುರುಬದೊಡ್ಡಿ, ಹನುಮಂತಪ್ಪ, ನರಸಿಂಹಲು ಇದ್ದರು.