ದೇಶದಲ್ಲಿ ಹಸಿವು, ಬಡತನ, ನಿರುದ್ಯೋಗ ತಾಂಡವಾಡುತ್ತಿದೆ. ಜಾತಿ, ಧರ್ಮದ ವಿಷಬೀಜ ಬಿತ್ತುತ್ತಿರುವ ಕಾರ್ಪೊರೇಟ್ ಶಕ್ತಿಗಳ ಕೃಪಾಪೋಷಿತ ಮನುವಾದವು ದೇಶದ ಜನರ ಭಾವೈಕ್ಯತೆಯ ಅಭಿವೃದ್ಧಿಗೆ ಕಂಟಕವಾಗಿದೆ ಎಂದು ಯುವಮುಖಂಡ ಅಜೀಜ್ ಜಾಗೀರದಾರ ಹೇಳಿದರು.
ರಾಯಚೂರು ನಗರದ ಆಶಾಪೂರ ರಸ್ತೆಯಲ್ಲಿರುವ ಟಿಯುಸಿಐ ಕಾರ್ಮಿಕ ರಾಜ್ಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭಾರತದ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117ನೇ ಜನ್ಮದಿನೋತ್ಸವ ಉದ್ಘಾಟಿಸಿ ಮಾತನಾಡಿದರು.
“ಭಗತ್ ಸಿಂಗ್ ಅವರು ತನ್ನ ತಾರುಣ್ಯ ವಯಸ್ಸಿನಲ್ಲಿ ಕಟ್ಟಾ ಕ್ರಾಂತಿಕಾರಿಯಾಗಿದ್ದರು. ಕಾರ್ಲ್ ಮಾರ್ಕ್ಸ್, ಲೆನಿನ್ ಮೊದಲಾದವರ ಚಿಂತನೆಗಳಿಂದ ತೀವ್ರ ಪ್ರಭಾವಿತರಾಗಿದ್ದ ಭಗತ್ ಸಿಂಗ್ ಸಹಜವಾಗಿಯೇ ಸಮಾಜವಾದದೆಡೆಗೆ ಆಕರ್ಷಿತರಾಗಿದ್ದರು” ಎಂದು ತಿಳಿಸಿದರು.
“ಧರ್ಮವು ಅಫೀಮು ಆಗಬಲ್ಲುದೆಂಬ ಸತ್ಯವನ್ನು ಅರಿತ ಭಗತ್ ಸಿಂಗ್, ತನ್ನ ಕ್ರಾಂತಿಕಾರಿ ಹೋರಾಟವನ್ನು ಧರ್ಮ ನಿರಪೇಕ್ಷತೆಯ ಆಧಾರದಲ್ಲೇ ನಡೆಸಬೇಕೆಂಬ ಧ್ಯೇಯ ಹೊಂದಿದ್ದು, ಅಂತೆಯೇ ನಡೆದರು. ನಾವು ಅವರ ಮಾರ್ಗದರ್ಶನದ ಆಶಯಗಳನ್ನು ಈಡೇರಿಸುವ ದೃಢಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಓವರ್ ಡೋಸ್ ಇಂಜೆಕ್ಷನ್‌ಗೆ ಏಳು ವರ್ಷದ ಬಾಲಕ ಬಲಿ: ವೈದ್ಯ ಪರಾರಿ
“ಸಮಸ್ತ ದುಡಿಯುವ ವರ್ಗವನ್ನು ಸಂಘಟಿಸಿ ಭಗತ್ ಸಿಂಗ್ ಕಂಡಂತಹ ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಲು ವಿದ್ಯಾರ್ಥಿ-ಯುವಜನರು ಬೀದಿಗಿಳಿಯಬೇಕಾಗಿದೆ. ಶಿಕ್ಷಣ ಪಡೆದರೂ ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ಯುವಜನರು ಉದ್ಯೋಗದ ಹಕ್ಕಿಗಾಗಿ ಕ್ರಾಂತಿಕಾರಿ ಹೋರಾಟಗಳನ್ನು ಮುನ್ನೆಡೆಸುವುದು ಇಂದಿನ ಯುವ ಪೀಳಿಗೆಯ ಧ್ಯೇಯವಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರುಗಳಾದ ನಿರಂಜನ್ ಕುಮಾರ್, ಎಲ್ಲಪ್ಪ, ರವಿಚಂದ್ರನ್, ಆನಂದ್ ಕುಮಾರ್, ಹನೀಫ್ ಅಬಕಾರಿ, ಸಂತೋಷ್, ಮಾರೆಪ್ಪ ಸೇರಿದಂತೆ ಇತರರು ಇದ್ದರು.
