ಸಂವಿಧಾನದ ದಿನಾಚರಣೆ ಪ್ರಯುಕ್ತ ಬೌದ್ಧರ ಧಾರ್ಮಿಕ ಹಕ್ಕುಗಳಿಗಾಗಿ ಬಿಹಾರದ ಬೋಧ್ ಗಯಾದ ಮಹಾಭೋದಿ, ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ರಾಯಚೂರು ಬೌದ್ಧ ಮಹಾಸಭಾ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
“ಬಿಹಾರದ ಬುದ್ದಗಯಾದ ಮಹಾಭೋದಿ, ಮಹಾವಿಹಾರವನ್ನು ಸಂಪೂರ್ಣ ಬೌದ್ಧರಿಗೆ ನೀಡಬೇಕು ಹಾಗೂ ಬಿಟಿ ಕಾಯ್ದೆ 1949ನ್ನು ರದ್ದುಗೊಳಿಸಬೇಕು” ಎಂದು ಆಗ್ರಹಿಸಿದರು.
ಎಲ್ಲ ಧರ್ಮೀಯರಿಗೆ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ನಿರ್ವಹಿಸು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಗುರುದ್ವಾರವನ್ನು ಸಿಖ್ ಧರ್ಮೀಯರು, ದರ್ಗಾಗಳನ್ನು ಮುಸ್ಲಿಮರು ಹಾಗೂ ಓರಿಸ್ಸಾದ ಜಗನ್ನಾಥ ಮಂದಿರ, ಕೇರಳದ ಗುರುವಾಯುರ್ ದೇವಸ್ಥಾನ, ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಪ್ರದೇಶದ ಕಾಶಿ, ಶ್ರೀಶೈಲ, ತಿರುಪತಿ, ಕಾಶ್ಮೀರ ವೈಷ್ಣವಿದೇವಿ ದೇವಾಲಯಗಳನ್ನು ಹಿಂದುಗಳಿಗೆ ಪೂಜೆ ಹಾಗೂ ಆಡಳಿತ ಮಂಡಳಿ ನಿರ್ವಹಣೆ ಮಾಡಲು ಅಧಿಕಾರ ನೀಡಲಾಗಿದೆ. ಆದರೆ ಬೌದ್ದರು ಆರಾಧಿಸುವ ಬುದ್ದಗಯಾವನ್ನು ಬೌದ್ದ ಧರ್ಮಿಯರಿಗೆ ನೀಡುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು ನಗರದ 31ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಗೆಲುವು
“ಬುದ್ದಗಯಾ ಹಿಂದುಗಳ ನಿಯಂತ್ರಣದಲ್ಲಿದ್ದು, ಬೌದ್ದ ಧರ್ಮಿಯರಿಗೆ ನೀಡಲು ಅವಕಾಶ ಕೊಡಬೇಕು. ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿರುವಾಗ ಸಂವಿಧಾನ ಬದ್ದವಾದ ಧಾರ್ಮಿಕ ಅವಕಾಶಗಳಿಂದ ಬೌದ್ದರನ್ನು ವಂಚಿಸುವುದನ್ನು ನಿಲ್ಲಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರವೀಂದ್ರನಾಥ ಪಟ್ಟಿ, ಮಹಾಸಭಾ ಅದ್ಯಕ್ಷ ಶಿವರಾಜ ಜಾನೇಕಲ್, ಬಸವರಾಜ, ವಿಶ್ವನಾಥ ಪಟ್ಟಿ, ಮಹೇಶ, ನರಸಿಂಹಲು, ರವಿ ರಾಂಪುರು, ಮಾರೆಪ್ಪ ಸೇರಿದಂತೆ ಅನೇಕರು ಇದ್ದರು.
