ಮಾನ್ವಿ ತಾಲೂಕು ಪಂಚಾಯತಿ ಕಾರ್ಯಾಲಯದ ಮುಂದೆ ದ್ವಿಚಕ್ರ ವಾಹನ ಪಾರ್ಕಿಂಗ್ ನಿರ್ಮಾಣದ ಹೆಸರಲ್ಲಿ, ಕಾಮಗಾರಿ ನಿರ್ವಹಿಸದೆ 02 ಲಕ್ಷ ರೂ. ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾ ಅಧಿಕಾರಿ (ಇಒ) ಮತ್ತು ಕಿರಿಯ ಇಂಜಿನಿಯರ್ (ಜೆಇ) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಒತ್ತಾಯಿಸಿದ್ದಾರೆ.
ಅವ್ಯವಹಾರ ಕುರಿತು ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಅವರು, “ತಾಲೂಕು ಪಂಚಾಯತಿಯಲ್ಲಿ 2022-23ನೇ ಸಾಲಿನ ‘ಸ್ಟ್ಯಾಂಪ್ ಡ್ಯೂಟಿ’ ಅನುದಾನದಲ್ಲಿ ಮೋಟಾರ್ ಸೈಕಲ್ ಪಾರ್ಕಿಂಗ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ನಡೆಸದೆಯೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಎತ್ತುವಳಿ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
ಕರ್ತವ್ಯಲೋಪ ಎಸಗಿ ಸರ್ಕಾರದ ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.