ದೇಶದಲ್ಲಿ ಕಳೆದ 10 ವರ್ಷದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ತನ್ನ ನ್ಯೂನ್ಯತೆಗಳನ್ನು ಮುಚ್ಚಿಟ್ಟು, ಮಾಡಿದ ಸಾಧನೆಗಳನ್ನು ಹೇಳದೆ, ದೇವರು, ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಕುತಂತ್ರ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾದ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಬಿಜೆಪಿ ಕುತಂತ್ರಗಳನ್ನು ನಡೆಸುತ್ತಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಏಕ ನೀತಿಗಳನ್ನು ಜಾರಿಗೆ ತರಲು ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಲೇಬೇಕು” ಎಂದು ಹೇಳಿದರು.
“ಕೋಮುವಾದ ಬಿಜೆಪಿ ಪಕ್ಷ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಮುಂದಾಗಿದ್ದು, ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು, ನ್ಯೂನ್ಯತೆಗಳನ್ನು ಹೇಳದೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಕುತಂತ್ರ ನಡೆಸಿದೆ. ಅಧಿಕಾರದಲ್ಲಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಸಂವಿಧಾನ ವಿರೋಧಿ, ಚುನಾವಣೆ ಆಯೋಗ ವಿರೋಧಿಯಾಗಿದೆ” ಎಂದರು.
“ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಆರೋಗ್ಯ, ಶಿಕ್ಷಣ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಿದೆ. ಆದರೆ ಬಿಜೆಪಿ ಆಮ್ ಆದ್ಮಿ ಸರ್ಕಾರವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸುಗ್ರೀವಾಜ್ಞೆ ಬಳಸಿಕೊಂಡು ರಾಜ್ಯಪಾಲರ ಮೂಲಕ ಅಧಿಕಾರ ನಡೆಸಲು ಮುಂದಾಗಿದೆ” ಎಂದು ಆರೋಪಿಸಿದರು.
“ಕೇರಳ, ತಮಿಳುನಾಡು, ಪಂಜಾಬ್ ಸೇರಿ ಇತರೆ ರಾಜ್ಯದಲ್ಲಿ ರಾಜ್ಯಪಾಲರಿಗೆ ಅಧಿಕಾರ ನೀಡಿ, ಅಲ್ಲಿನ ಸರ್ಕಾರವನ್ನು ಅಭದ್ರಗೊಳಿಸಲು ಮುಂದಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಕಳೆದ 1 ವರ್ಷದ ಹಿಂದೆ ಭ್ರಷ್ಟಾಚಾರ ಪಟ್ಟಕಟ್ಟಿ ಪಕ್ಷದವರನ್ನು ಬಂಧಿಸಿದ್ದಾರೆ. ಬಿಡುಗಡೆ ಮಾಡದೇ ಬೇಲ್ ಮಂಜೂರು ಮಾಡಿಸದೇ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ದೂರಿದರು.
“ದೇಶದಲ್ಲಿ ಏಕನೀತಿ ತರಲು ಮುಂದಾಗಿರುವ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಬೇಕಾಗಿದೆ. ಅಧಿಕಾರ ನೀಡಿದರೆ ಒಂದು ದೇಶ ಒಂದು ಚುನಾವಣೆ, ಸರ್ವಾಧಿಕಾರಿ, ಏಕ ಚಕ್ರಾಧಿಪತ್ಯ ಆಡಳಿತ ನಡೆಸಲು ಮುಂದಾಗಿದೆ. ಹಾಗಾಗಿ ದೇಶದ ಪ್ರಜ್ಞಾವಂತ ಮತದಾರರು ತಿರಸ್ಕರಿಸಬೇಕು. ನ್ಯಾಯಾಂಗ ವ್ಯವಸ್ಥೆ, ಇ.ಡಿ, ಸಂಸ್ಥೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ” ಎಂದು ಅಪಾದಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಗೆ ಮುಂದಾಗಬೇಕು. ಕೇವಲ ಗ್ಯಾರಂಟಿಯ ಭರವಸೆಗೆ ಸೀಮಿತಗೊಳಿಸದೇ ಅಭಿವೃದ್ಧಿ ಮರೆತಿದೆ. ಬಜೆಟ್ ಮಂಡಿಸಿದ್ದು, ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಬಳಕೆಯಾಗಬೇಕು. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯಬೇಕು. ಶೇ.50ರಷ್ಟು ಉದ್ಯೋಗ ಖಾಲಿಯಿದ್ದು, ಭರ್ತಿ ಮಾಡುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಎಲ್ಲ ಶಾಲೆಗಳನ್ನು ಸರ್ಕಾರ ವ್ಯಾಪ್ತಿಗೆ ತಂದು ರೈತರು ಮತ್ತು ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸಿಕೊಡುವ ಕೆಲಸ ಮಾಡಬೇಕು” ಎಂದು ತಿಳಿಸಿದರು.
“ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನಾರಾ ಪ್ರತಾಪ್ ರೆಡ್ಡಿ ಅವರನ್ನು ಪಕ್ಷವು ಬೆಂಬಲಿಸಲಿದೆ” ಎಂದರು.
“ಜಿಲ್ಲೆಯಲ್ಲಿ ಒಂದು ವರ್ಷಕ್ಕೂ ಅಧಿಕ ದಿನಗಳು ಏಮ್ಸ್ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಧೋರಣೆ ಅನುಸರಿಸುತ್ತಿದೆ. ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಕೇಂದ್ರದ ಯೋಜನೆಗಳು ಸೀಮಿತವಾದರೆ ಉಳಿದ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಈ ಭಾಗದಲ್ಲಿ ಏಮ್ಸ್ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಲುವು ಪ್ರಕಟಿಸಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕು. ದೆಹಲಿ ಮಟ್ಟದಲ್ಲಿಯೂ ಹೋರಾಟ ನಡೆಸಲಾಗಿದೆ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಚುನಾವಣೆ ಮುಗಿದ ಬಳಿಕ ಆಮ್ ಆದ್ಮಿ ಪಕ್ಷದಿಂದ ದೆಹಲಿಯಲ್ಲಿ ಏಮ್ಸ್ ವಿಚಾರ ಪ್ರಸ್ಥಾಪಿಸಲಾಗುವುದು” ಎಂದು ತಿಳಿಸಿದರು.
ನಾರಾ ಪ್ರತಾಪ್ ರೆಡ್ಡಿ ಮಾತನಾಡಿ, “ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು, ಮತ ನೀಡುವ ಮೂಲಕ ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮೇವಿನ ಕೊರತೆ; ಜಾನುವಾರುಗಳ ಮಾರಾಟಕ್ಕೆ ಮುಂದಾದ ರೈತರು
2018ರಲ್ಲಿಯೂ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದು, ಮತದಾರರು ಅಮೂಲ್ಯ ಮತಗಳನ್ನು ನೀಡಿದ್ದರು. ಆದರೆ ಸಾವಿರಾರು ಸಂಖ್ಯೆಯಲ್ಲಿ ಕುಲಗೆಟ್ಟ ಮತಗಳಿಂದ ಪರಾಭವಗೊಂಡಿದ್ದೇನೆ. ಆದರೂ ಪದವಿಧರ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಪರ್ಕ ಹೊಂದಿದ್ದು, ಶೈಕ್ಷಣಿಕ, ಸಾಮಾಜಿಕ ಸಂಘಟನೆಯೊಂದಿಗೆ ನಿಕಟ ಸಂಪರ್ಕವಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರುದ್ರಯ್ಯ, ಡಿ ವೀರೇಶ್ ಕುಮಾರ್, ಮರಿಸ್ವಾಮಿ ರೆಡ್ಡಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ
