ಸಮಾಜದಲ್ಲಿ ಮನುಷ್ಯ ಮನುಷ್ಯನನ್ನು ಶೋಷಿಸುವುದನ್ನು ತೊಲಗಿಸಿ ಸಹಕಾರದೊಂದಿಗೆ ಬದುಕುವಂತಾಗಬೇಕು. ಶೋಷಣೆ ಮುಕ್ತ ಸಮಾಜ ಕಟ್ಟುವುದು ಸ್ವಾತಂತ್ರ್ಯ ಪಡೆಯುವುದರಷ್ಟೇ ಮುಖ್ಯ ಎಂದು ಎಐಡಿವೈಒ ರಾಯಚೂರು ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಅಭಿಪ್ರಾಯಪಟ್ಟರು.
ನಗರದ ಮಾವಿನಕೆರೆ ಉದ್ಯಾನವನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥದ ನಾಯಕ ಚಂದ್ರಶೇಖರ್ ಆಜಾದ್ ಅವರ ಸ್ಮರಣ ದಿನವನ್ನು ಆಚರಿಸಿ ಮಾತನಾಡಿದ ಅವರು, “ಆಜಾದ್ ಅವರು ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ತಮ್ಮದೇ ಆದ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಬಲ ಶಕ್ತಿಗಳು ದುರ್ಬಲರ ಮೇಲೆ ನಡೆಸುತ್ತಿದ್ದ ಶೋಷಣೆಯನ್ನು ಕೊನೆಗಾಣಿಸಬೇಕು ಎಂಬುದು ಅವರ ಹೋರಾಟದ ಮುಖ್ಯ ಉದ್ದೇಶವಾಗಿತ್ತು. ಅಂತಹ ಮಹನೀಯರ ದೇಶಪ್ರೇಮ, ತ್ಯಾಗ, ಬಲಿದಾನಗಳೇ ಇಂದು ನಾವು ಸ್ವತಂತ್ರವಾಗಿ ಬದುಕಲು ಕಾರಣ” ಎಂದರು.
“ಬ್ರಿಟಿಷರ ವಿರುದ್ಧ ನಡೆದ ಗುಂಡಿನ ಕಾಳಗದಲ್ಲಿ ಆಜಾದ್ ಮರಣ ಹೊಂದಿದರು. ಹೋರಾಟದ ಕಿಚ್ಚು ಅಂದಿನ ಯುವ ಜನರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ಅವರ ಜೀವನಾದರ್ಶಗಳು ಇಂದಿಗೂ ಜೀವಂತ. ಅಂತಹ ವೀರ ನಾಯಕರನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅಗತ್ಯವೆಂದು” ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ವಿವಿಗಳನ್ನು ಮುಚ್ಚುವ ತೀರ್ಮಾನ ಕೂಡಲೇ ಹಿಂಪಡೆಯಲು ಸಿಪಿಐಎಂ ಆಗ್ರಹ
ಈ ವೇಳೆ ಹಿರಿಯ ಉಪನ್ಯಾಸಕ ಅಮೃತ್, ಎನ್ಎಸ್ಎಸ್ ಅಧಿಕಾರಿ ರಂಜಿತ್ ಕುಮಾರ್, ಉಪನ್ಯಾಸಕ ನರೇಶ್ ಕುಮಾರ್, ಪ್ರವೀಣ್ ಹಾಗೂ ಹಲವು ವಿದ್ಯಾರ್ಥಿಗಳು ಇದ್ದರು.
