ವ್ಯಾಪಾರ, ಕೈಗಾರಿಕೆ ಸೇರಿದಂತೆ ಪೂರ್ಣ ಪ್ರಮಾಣ ಮಾಹಿತಿ ಸಂಗ್ರಹಿಸಲು ರಾಯಚೂರು ವಾಣಿಜ್ಯೋಧ್ಯಮ ಸಂಘದಿಂದ ವೈಬ್‌ಪೇಜ್ ಸಿದ್ದಪಡಿಸಲಾಗುತ್ತಿದೆ ಎಂದು ಸಂಘದ ನೂತನ ಅಧ್ಯಕ್ಷ ಎಸ್ ಕಮಲಕುಮಾರ ಜೈನ್ ಹೇಳಿದರು.
ರಾಯಚೂರು ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಿರಾಣಿ ಸೇರಿದಂತೆ ಎಲ್ಲ ವ್ಯಾಪಾರಸ್ಥರ ಮಾಹಿತಿ ದಾಖಲೀಕರಣ ಮಾಡುವುದರಿಂದ ಗ್ರಾಹಕರು ಹಾಗೂ ಕೈಗಾರಿಕೆಗಳಿಗೆ, ವ್ಯಾಪಾರಸ್ಥರಿಗೂ ವಹಿವಾಟು ನಡೆಸಲು ಸಹಕಾರಿಯಾಗಲಿದೆ. ವೈಬ್ ಡೈರಕ್ಟರಿಗೆ ವೀಕ್ಷಿಸುವವರಿಗೆ ಎಲ್ಲ ರೀತಿ ಮಾಹಿತಿ ಒಂದೇ ವೇದಿಕೆಯಲ್ಲಿ ದೊರೆಯುವಂತೆ ಮಾಡಲು ಉದ್ದೇಶಿಸಲಾಗಿದೆ” ಎಂದು ತಿಳಿಸಿದರು.
“ಬಿಕಾಂ ಮತ್ತು ಎಂಬಿಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಲಾಗುತ್ತದೆ. ದಾಖಲೀಕರಣ ಮಾಡುವ ವಿದ್ಯಾರ್ಥಿಗಳಿಗೆ ಗೌರವಧನದ ಜೊತೆಗೆ ಪ್ರಮಾಣ ಪತ್ರ ನೀಡಲಾಗುತ್ತದೆ” ಎಂದರು.
“ರಾಯಚೂರಿನಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸುವುದು ಅಗತ್ಯವಾಗಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ ಕೃಷಿ ಆಧಾರಿತ ಹಾಗೂ ಔಷಧಿ ಉತ್ಪಾದನಾ ವಲಯ ಕೈಗಾರಿಕೆಗಳ ಸ್ಥಾಪನೆಗೆ ಒತ್ತನೀಡಬೇಕೆಂದು ಮನವಿ ಮಾಡಲಾಗಿದೆ” ಎಂದರು.
“ಕೈಗಾರಿಕಾ ವಲಯ ಸ್ಥಾಪನೆಗೆ 1500 ಎಕರೆ ಭೂಮಿಯ ಸ್ವಾಧೀನ, ಕೈಗಾರಿಕೆ ಪ್ರದೇಶಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವದುರ್ಗ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುವದು, ಗ್ರಾಮ ಪಂಚಾಯಿತಿಗಳಲ್ಲಿ 9ಎ ಮತ್ತು 11ಎ ಫಾರಂ ನೀಡುವುದು ವಿಳಂಬವಾಗುತ್ತಿದೆ. ಟ್ರಕ್ ಟರ್ಮಿನಲ್ ಸ್ಥಾಪಿಸಲು, ಟೆಕ್ಸ್‌ಟೈಲ್ಸ್ ಪಾರ್ಕ್ ಸ್ಥಾಪಿಸಲು ಹಾಗೂ ವಾಟರ್ ಟ್ರೀಟ್‌ಮೆಂಟ್ ಟ್ಯಾಂಕ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗುತ್ತಿಗೆದಾರರ ಬಾಕಿ ಹಣ ಪಾವತಿಸದೇ ಇದ್ದರೆ ಹೋರಾಟ; ನಾಗಪ್ಪ ಗಿರಣಿ ಎಚ್ಚರಿಕೆ
“ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಲ್ಲದೇ ಹೊಸ ಕೈಗಾರಿಕೆಗಳು ಬಾರದಂತಾಗಿವೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಕ್ರಮವಹಿಸುವುದಾಗಿ ಕೈಗಾರಿಕಾ ಸಚಿವರು ಭರವಸೆ ನೀಡಿದ್ದಾರೆ” ಎಂದರು.
ತ್ರಿವಿಕ್ರಮ ಜೋಷಿ, ಮಲ್ಲಿಕಾರ್ಜುನ ದೋತರಬಂಡಿ, ಕೆ ಎಂ ಪಾಟೀಲ್, ಜಂಬಣ್ಣ ಯಕ್ಲಾಸಪುರು, ಕೆ ವಿ ಮನೋಹರ, ಜಗದೀಶ ಗುಪ್ತಾ, ನಾಗನಗೌಡ ಹರವಿ, ಉದಯಕಿರಣ ಇದ್ದರು.