ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಥಳದಲ್ಲೇ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟಿರುವ ಯುವಕನನ್ನು ರಾಘವೇಂದ್ರ (38) ಎಂದು ಗುರುತಿಸಲಾಗಿದೆ. ಮಾನ್ವಿ ತಾಲೂಕಿನ ಗೋವಿನದೊಡ್ಡಿ ಗ್ರಾಮದ ನಿವಾಸಿಎಂದು ತಿಳಿದುಬಂದಿದೆ.
ಬೆಳೆಗೆ ಕ್ರಿಮಿನಾಶಕ ಖರೀದಿ ಮಾಡುವುದಕ್ಕೆಂದು ಪಟ್ಟಣಕ್ಕೆ ಬರುತ್ತಿದ್ದ ವೇಳೆ ಗೋವಿನದೊಡ್ಡಿ ಕ್ರಾಸ್ ಬಳಿ ಕಾರು ರಭಸವಾಗಿ ಡಿಕ್ಕಿಯಾಗಿದೆ.

ಕಾರು ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನಿಡಿದ್ದಾರೆ. ಅಪಘಾತ ನಡೆದ ತಕ್ಷಣ ಕಾರು ಚಾಲಕ, ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಮೃತಪಟ್ಟಿರುವ ರಾಘವೇಂದ್ರರಿಗೆ ಇಬ್ಬರು ಮಕ್ಕಳಿದ್ದು, ಅನಾಥರಾಗಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮಾನ್ವಿ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದೇ ರಸ್ತೆಯಲ್ಲಿ ಈ ಹಿಂದೆಯು ಕೂಡ ಶಾಲಾ ವಾಹನ ಡಿಕ್ಕಿಯಾಗಿ ಮಕ್ಕಳು ಗಂಭೀರ ಗಾಯಗೊಂಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣಕ್ಕೆ ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಾನ್ವಿ ಹಾಗೂ ರಾಯಚೂರು ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿಯೇ ಅಪಘಾತಗಳು ನಡೆಯುತ್ತಿದೆ. ಆದ್ದರಿಂದ ಶೀಘ್ರವೇ ಕಾಮಗಾರಿ ಮುಗಿಸಿ, ಸೂಕ್ತ ಸೌಲಭ್ಯಗಳಿರುವ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

