ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆ ಇಂದಿನಿಂದ ನಡೆಯುತ್ತಿದ್ದು, ಜನರಲ್ಲಿ ಒಳಮೀಸಲಾತಿ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ರಥಯಾತ್ರೆ ಜಿಲ್ಲೆಗೆ ಮೇ.8 ರಂದು ನಗರಕ್ಕೆ ಆಗಮಿಸಲಿದ್ದು, ಅಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಸಂಚಾಲಕ ಎಸ್.ನರಸಿಂಹಲು ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ 30 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟಗಳು ನಡೆದ ಫಲವಾಗಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೆ ರಾಜ್ಯಗಳಿಗೆ ಅಧಿಕಾರ ನೀಡಿದ್ದು, ಅದರಂತೆ ಒಳಮೀಸಲಾತಿಗಾಗಿ ಸಮೀಕ್ಷೆ ಪ್ರಾರಂಭವಾಗಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಯಾಗದೇ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.
ಇದೇ ವೇಳೆ ಎಲ್.ಬಿ.ಸುರೇಶ ಮಾತನಾಡಿ, ಒಳಮೀಸಲಾತಿ ಸಮೀಕ್ಷೆ ಪ್ರರಂಭವಾಗಿದ್ದು, ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ರಥಯಾತ್ರೆ ಈಗಾಗಲೇ 13 ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸುತ್ತಾ ಮೇ.8 ರಂದು ಜಿಲ್ಲೆಗೆ ಆಗಮಿಸಲಿದೆ. ನಗರದಲ್ಲಿ 200 ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಿ ರಥಯಾತ್ರೆಯನ್ನು ಸ್ವಾಗತಿಸಲಾಗುವುದು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೂನ್ 28,29 ಅಖಿಲ್ ಭಾರತ್ ದಲಿತ ಸಾಹಿತ್ಯ ಸಮ್ಮೇಳನ ; ತಾಯರಾಜ್
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರಂಗಮಂದಿರವರಗೆ ಮೆರವಣಿಗೆ ನಡೆಸಿ ರಂಗ ಮಂದಿರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಕೀಲ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಸಮಾವೇಶ ಕೇವಲ ಒಂದು ಜಾತಿಗೆ ಸೀಮಿತವಲ್ಲ. ಶೋಷಿತ ಜನಾಂಗದ ಎಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಬೇಕು. ರಾಜ್ಯ ಸರ್ಕಾರದಿಂದ ಒಳಮೀಸಲಾತಿ ಜಾರಿಯಾಗುವವರೆಗೆ ಯಾವುದೇ ನೇಮಕಾತಿ, ಮುಂಬಡ್ತಿಯನ್ನು ಮಾಡದೇ ತಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದು, ರಾಜ್ಯ ಸರ್ಕಾರ ಕೋರ್ಟ್ ಆದೇಶಕ್ಕೆ ಗೌರವ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೇಮರಾಜ್ ಅಸ್ಕಿಹಾಳ, ನರಸಿಂಹಲು ಮರ್ಚಟಾಳ್, ಜೈಪಾಲ, ಸುನೀಲ್, ಜಂಬಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.