ಒಳಮೀಸಲಾತಿ ಜಾರಿಗಾಗಿ ಸುದೀರ್ಘವಾಗಿ ನಡೆದ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ನೀಡಲು ಜಾತಿಗಣತಿ ಸಮೀಕ್ಷೆ ನಡೆಸಿದ್ದು, ಸಮಾಜದ ಎಲ್ಲ ಬಾಂಧವರು ಜಾತಿ ಕಾಲಂನಲ್ಲಿ ʼಮಾದಿಗʼ ಎಂದು ನೊಂದಾಯಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎ ವಸಂತಕುಮಾರ ಹೇಳಿದರು.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಜಾತಿಗಣತಿ ಜಾಗೃತಿ ಕಾರ್ಯಕ್ರಮದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿ, ಅಂಬೇಡ್ಕರ್ ವೃತ್ತದ ಮೂಲಕ ಬಾಬು ಜಗಜೀವನರಾಮ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ಸಂಚರಿಸಿ ಜಾಗೃತಿ ಮೂಡಿಸುವಾಗ ಮಾತನಾಡಿದರು.
“ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು, ಬೇರೆ ಯಾವುದೇ ಜಾತಿ ಉಪಜಾತಿ ಹೆಸರು ಬರೆಯಿಸಿದ್ದರೆ ನಮ್ಮ ಮುಂದಿನ ಪೀಳಿಗೆಯು ಸೌಲಭ್ಯ ಹಾಗೂ ಮೀಸಲಾತಿಯಿಂದ ವಂಚಿತವಾಗುತ್ತದೆ” ಎಂದು ಹೇಳಿದರು.
“ಮೇ 5ರಿಂದ ಒಳಮೀಸಲಾತಿ ಸಮೀಕ್ಷೆ ಆರಂಭವಾಗಲಿದ್ದು, ಸಮೀಕ್ಷೆದಾರರು ಮನೆ ಮನೆಗೆ ತೆರಳಿ ಮಾಹಿತಿ ಪಡೆಯಲಿದ್ದಾರೆ. ಸಮಾಜಕ್ಕೆ ಗಣತಿ ಬಗ್ಗೆ ಮಾಹಿತಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಸಮಾಜದ ಜನರು ಗೊಂದಲಕ್ಕೆ ಒಳಗಾಗದೇ ಕ್ರಮ ಸಂಖ್ಯೆ 61ರಲ್ಲಿ ʼಮಾದಿಗʼ ಎಂದು ಬರೆಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಕೆ ಎಸ್ ಆರ್ ಟಿ ಸಿ ಬಸ್, ಬೈಕ್ ನಡುವೆ ಡಿಕ್ಕಿ ; ಓರ್ವ ಸಾವು
“ರಾಜ್ಯದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಸುದೀರ್ಘ ಹೋರಾಟ ನಡೆದಿದೆ. ಮೀಸಲಾತಿ ಜಾರಿಯಾಗಬೇಕೆಂಬ ಉದ್ದೇಶ ಹಾಗೂ ಕನಸ್ಸನ್ನು ಹೊಂದಲಾಗಿತ್ತು. ವಂಚಿತ ಮಾದಿಗ ಸಮಾಜದಿಂದ ಒಳಮೀಸಲಾತಿ ಜಾರಿಗೆ ಹೋರಾಟವೂ ನಡೆಯಿತು. ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿಯೂ ಈ ಬಗ್ಗೆ ಹೋರಾಟ ನಡೆದಿದ್ದು, ಹೋರಾಟಕ್ಕೆ ಹೆಚ್ಚು ಶಕ್ತಿ ಬಂದಿದೆ, ಜಿಲ್ಲೆಯ ಹೋರಾಟಗಾರರು, ಸಮಾಜದ ಮುಖಂಡರ ನಿರಂತರವಾಗಿ ಹೋರಾಟ ನಡೆಸಿದ್ದರಿಂದ ಸರ್ಕಾರ ಒಳಮೀಸಲಾತಿ ಜಾರಿಗೆ ಮುಂದಾಗಿದೆ” ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮಾದಿಗ ಸಮಾಜದ ಮುಖಂಡರಾದ ಅಂಬಣ್ಣ ಅರೋಲಿ, ಎಂ ವಿರೂಪಾಕ್ಷಿ, ಜೆ ಬಿ ರಾಜು, ರವಿಂದ್ರ ಜಲ್ದಾರ್, ರಾಘವೇಂದ್ರ ಬೋರಡ್ಡಿ, ರಾಜು, ಕೆಪಿ ಅನಿಲ್ ಕುಮಾರ, ಜಯಣ್ಣ, ಜನಾರ್ಧನ ಹಳ್ಳಿಬೆಂಚಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.