ರಾಜ್ಯದಲ್ಲಿ ಬರ ಆವರಿಸಿದ್ದು, ಬರ ಕಾಮಗಾರಿಗೆ ಕೇವಲ ಜಿಲ್ಲೆಗೆ 9 ಕೋಟಿ ರೂ. ಬಿಡುಗಡೆಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬಾರದೇ ಸಂಪೂರ್ಣ ವಿಫಲವಾಗಿವೆ ಎಂದು ಜೆಡಿಎಸ್ ರಾಯಚೂರು ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದೆ. ಜಿಲ್ಲೆಯಲ್ಲಿ ಆರು ತಾಲೂಕಿನ ಏಳು ಕ್ಷೇತ್ರದಲ್ಲಿ ಸರ್ಕಾರ ಬರ ಘೋಷಣೆ ಮಾಡಿತ್ತು. ನಂತರ ಎರಡು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಜಿಲ್ಲಾಡಳಿತ, ಕಂದಾಯ ಇಲಾಖೆ ಕೃಷಿ ಇಲಾಖೆ ಸೇರಿ ಬರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರ ಬರ ಕಾಮಗಾರಿಗೆ ಜಿಲ್ಲೆಗೆ 9 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಕೇವಲ ಕುಡಿಯುವ ನೀರಿಗೆ ಆಯಾ ತಾಲೂಕಿಗೆ 50 ಲಕ್ಷ ರೂ. ನೀಡಿದೆ. ಸರ್ಕಾರದ ಆದೇಶದ ಮೇರೆಗೆ ಕಾಮಗಾರಿ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ. ಆದರೆ, ಯಾವುದೇ ಕಾಮಗಾರಿ ಮಾಡಿಲ್ಲ” ಎಂದು ಆರೋಪಿಸಿದರು.
“ಹತ್ತಿ, ಭತ್ತ, ಮೆಣಸಿನಕಾಯಿ, ತೊಗರಿ ಸೇರಿ ಇತರೆ ಬೆಳೆಗಳು ನಾಶವಾಗಿವೆ. ಸರ್ಕಾರ ರೈತರ ನೆರವಿಗೆ ಬಂದಿಲ್ಲ. ಜಿಲ್ಲೆಯಲ್ಲಿ ಈವರೆಗೆ 27 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 25 ಮಂದಿ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಿದ್ದು, ಇನ್ನೂ ಇಬ್ಬರಿಗೆ ಪರಿಹಾರ ನೀಡಬೇಕಿದೆ. ರಾಜ್ಯದಲ್ಲಿ ಬರಗಾಲ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಪ್ರತಿ ಜಿಲ್ಲೆಯಲ್ಲಿ ಬರ ಅಧ್ಯಯನಕ್ಕಾಗಿ ಶಾಸಕರು ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಸಮಿತಿ ಮಾಡಿದ್ದು, ಆಯಾ ಜಿಲ್ಲೆಯಲ್ಲಿ ಅಧ್ಯಯನ ಮಾಡಲಿದ್ದಾರೆ” ಎಂದರು.
ಜಿಲ್ಲೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕಿ ಕರೆಮ್ಮ ಜಿ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಹಾಂತೇಶ ಪಾಟೀಲ್ ಅತ್ತನೂರು, ನರಸಿಂಹ ನಾಯಕ, ಸಿದ್ದು ಬಂಡಿ ಶಿವಶಂಕರ ವಕೀಲ, ಲಕ್ಷ್ಮಿಪತಿ, ಬುಡ್ಡನಗೌಡ ಸೇರಿದಂತೆ ಪದಾಧಿಕಾರಿಗಳು ಒಳಗೊಂಡು ನವೆಂಬರ್ 17, 18 ಮತ್ತು 19ರಂದು ಬರ ಅಧ್ಯಯನ ಕೈಗೊಳ್ಳಲಿದ್ದೇವೆ” ಎಂದು ತಿಳಿಸಿದರು.
“ಬರ ಅಧ್ಯಯನ ನಡೆಸಿ ಬೆಳೆಹಾನಿ ಕುರಿತು ವರಿಷ್ಠರಿಗೆ ವರದಿ ಸಲ್ಲಿಸುತ್ತೇವೆ. ನಂತರ 19 ಶಾಸಕರ ಮೂಲಕ, ಬೆಳೆನಷ್ಟ ಪರಿಹಾರ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ, ಜಿಲ್ಲೆಯಲ್ಲಿ ಬರ ವರದಿಯನ್ನು ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ” ಎಂದರು.
“ಜಿಲ್ಲೆಯಲ್ಲಿ ಬರ ಆವರಿಸಿದ್ದು, ಮೆಣಸಿನಕಾಯಿ, ಭತ್ತ, ತೊಗರಿ, ಹತ್ತಿ ಸೇರಿದಂತೆ ಬೆಳೆ ಹಾನಿಯಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಬೆಳೆ ವೀಕ್ಷಣೆ ಮಾಡಿಲ್ಲ. ಸಮಿಕ್ಷೆ ನಡೆಸಿಲ್ಲ ಹಾಗೂ ಬರ ಕಾಮಗಾರಿಗೆ ಸಭೆ ಮಾಡಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಹಾಳಾದ ಸಿಸಿ ಕ್ಯಾಮೆರಾ; ವಾಹನ ಸಂಚಾರ ಅಸ್ತವ್ಯಸ್ತ
“ಬೇರೆ ಜಿಲ್ಲೆಯವರನ್ನು ಉಸ್ತುವಾರಿಯನ್ನಾಗಿ ಮಾಡಿದರೆ ಜಿಲ್ಲೆಯ ಬಗ್ಗೆ ಕಳಕಳಿ ಇರುವುದಿಲ್ಲವೆಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಬರ ಅಧ್ಯಯನ ಮಾಡಲು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಸರ್ಕಾರ ಕೂಡಲೇ ಬರ ಅಧ್ಯಯನ ಕೈಗೊಂಡು ಬೆಳೆಹಾನಿಯಾದ ರೈತರಿಗೆ ಪರಿಹಾರ ಕೊಡಬೇಕು. ಬರಗಾಲ ಬಂದಾಗ ಕೇಂದ್ರ ಸರ್ಕಾರವೂ ಸ್ಪಂದಿಸಬೇಕು. ಬರಪರಿಹಾರ ನೀಡುವುದು ಎರಡೂ ಸರ್ಕಾರಗಳ ಜವಾಬ್ದಾರಿಯಾಗಿದೆ” ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಶಿವಶಂಕರ ವಕೀಲ, ಯೂಸೂಫ್‌ಖಾನ್, ಲಕ್ಷೀಪತಿ ಗಾಣದ ನರಸಿಂಹ ನಾಯ್ಕ ಇದ್ದರು.
ವರದಿ : ಹಫೀಜುಲ್ಲ