ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಮಹಿಳಾ ಘಟಕದ ಪದಾಧಿಕಾರಿಗಳು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಲೋಕಸಭಾ ಚಳಿಗಾಲ ಆದಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಿಸೆಂಬರ್ 18ರಂದು ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಖಂಡನೀಯ” ಎಂದರು.
“ಅಂಬೇಡ್ಕರ್ ಹೆಸರು ಹೇಳುವುದು ಈಗ ಶೋಕಿಯಾಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಏಳು ಜನ್ಮಗಳವರಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತೆಂದು ಲೋಕಸಭಾ ಕಲಾಪದಲ್ಲಿ ನಾಲಿಗೆ ಹರಿಬಿಟ್ಟು ಬಾಬಾ ಸಾಹೇಬರಿಗೆ ಅವಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಂಥ ಹೇಳಿಕೆ ಕೋಮು ಗಲಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ಸಂವಿಧಾನದ ಅಡಿಯಲ್ಲಿ ಬಹುದೊಡ್ಡ ಜವಾಬ್ದಾರಿ ವಹಿಸಿಕೊಂಡ ಕೇಂದ್ರ ಗೃಹಸಚಿವ ಈ ರೀತಿ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದು, ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಮಿತ್ ಶಾ ರಾಜೀನಾಮೆಗೆ ದಲಿತರಪರ ಹೋರಾಟಗಾರರ ಆಗ್ರಹ
“ದೇಶದಲ್ಲಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದು ದೇಶದ ಎಲ್ಲ ಮಹಿಳೆಯರಿಗೆ ಸಮಾನ ಅವಕಾಶ ಮಾಡಿಕೊಡಲಾಗಿದೆ. ಅಂಬೇಡ್ಕರ್ ನಮಗೆ ನಿತ್ಯ ಸ್ಮರಣೆ. ಅವರನ್ನು ಈ ದೇಶದ ಪ್ರತಿ ಪ್ರಜೆಯೂ ಮರೆಯುವಂತಿಲ್ಲ” ಎಂದರು.
ಈ ಸಂದರ್ಭದಲ್ಲಿ ಈರಮ್ಮ, ಲಲಿತಾ ಆರೋಲೀ ಕರ್, ಅರ್ಚನಾ ಸುಂಕಾರಿ, ಸುಜಾತಾ ದಾದಾಸ್, ನಾಗರತ್ನ, ಲಕ್ಷ್ಮಿ, ಸಾವಿತ್ರಿ, ಪ್ರಿಯದರ್ಶಿನಿ ನಂದಿನಿ, ಮೀನಾಕ್ಷಿ ಸೇರಿದಂತೆ ಬಹುತೇಕರು ಇದ್ದರು.
