ವೈಚಾರಿಕ ಬರಹಗಾರ, ಕರ್ನಾಟಕ ಏಕೀಕರಣ ಮತ್ತು ರೈತ ಹೋರಾಟಗಾರ ಚನ್ನಬಸವಪ್ಪ ಬೆಟ್ಟದೂರು ಅವರ ನೆನಪಿನ ದಿನಾಚರಣೆಯ ಅಂಗವಾಗಿ ಅಧ್ಯಯನ ಶಿಬಿರ ಕಾರ್ಯಕ್ರಮವನ್ನು ಜೂ.13 ರಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಅವರು ನೆರವೇರಿಸಲಿದ್ದಾರೆ. ಸದಸ್ಯತ್ವ ನೊಂದಣಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನಂತರ ತುಂಗಭದ್ರ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲ ಹಾಗೂ ಎಡದಂಡೆ ನಾಲೆಯ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ವಿಷಯವನ್ನು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮಂಡಿಸಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ ಪಾಟೀಲ್ ವಹಿಸಿಕೊಳ್ಳಲಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರ್ ಬೈಕ್ ನಡುವೆ ಡಿಕ್ಕಿ ; ಇಬ್ಬರ ಸಾವು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಹಿರಿಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ಅವರು ವಹಿಸಿಕೊಳ್ಳಲಿದ್ದಾರೆ.ರೈತ ಹೋರಾಟಗಾರ ಚನ್ನಬಸವಪ್ಪ ಅವರ ಬಗ್ಗೆ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಅವರು ಮಾತನಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಅನೇಕ ಹೋರಾಟಗಾರರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಐಕ್ಯ ಹೋರಾಟದ ಅನಿವಾರ್ಯತೆ ಕುರಿತು ಎರಡನೇ ಗೋಷ್ಠಿ ನಡೆಯಲಿದ್ದು, ವಿಷಯವನ್ನು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಎನ್.ಡಿ ವಸಂತಕುಮಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಸರ್ಕಾರಗಳು ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ. ಕೃಷಿ ಭೂಮಿ ಹಾಗೂ ಕೃಷಿ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಕೈಗೆ ನೀಡಲು ಸರ್ಕಾರಗಳು ಮುಂದಾಗುತ್ತಿವೆ. ಈ ಸಮಸ್ಯೆಗೆ ಪರಿಹಾರ ಸಿಗಲು ಐಕ್ಯ ಹೋರಾಟದ ಅಗತ್ಯವಿದೆ ಎಂದು ಹೇಳಿದರು.
ರೈತವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ 13 ತಿಂಗಳುಗಳ ಕಾಲ ದೆಹಲಿಯಲ್ಲಿ ಹೋರಾಟ ನಡೆದಿದ್ದು, ನಂತರ ಪ್ರಧಾನಿ ಮೋದಿ ದೇಶದ ಜನರಲ್ಲಿ ಹಾಗೂ ರೈತರಲ್ಲಿ ಕ್ಷಮೆಯಾಚಿಸಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ. ಈ ಕಾಯ್ದೆಗಳನ್ನು ರಾಜ್ಯ ಸರ್ಕಾರವೂ ಹಿಂಪಡೆಯಬೇಕೆಂಬ ಒತ್ತಾಯವಿದೆ. ಅದಕ್ಕಾಗಿ ಹೋರಾಟದ ಶಕ್ತಿಯನ್ನು ರಾಜ್ಯದಲ್ಲಿ ಬಲಪಡಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಉಪಾಧ್ಯಕ್ಷ ಬೂದಯ್ಯಸ್ವ್ವಾಮಿ, ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವನಗೌಡ ಬಲ್ಲಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಾರೆಡ್ಡಿ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
