ರಾಯಚೂರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಮೂಲಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಅವ್ಯವಸ್ಥೆ ತಾಂಡವವಾಡುತ್ತಿದೆ. ಇಲಾಖೆವಾರು ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ವಾರ್ಡನ್‌ಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆರ್‌ವೈಎಫ್‌ಐ ಕಾರ್ಯಕರ್ತರು ಆಗ್ರಹಿಸಿದರು.
ರಾಯಚೂರು ತಹಶೀಲ್ದಾರ್ ಗ್ರೇಡ್ 2 ಪರಶುರಾಮ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, “ವಸತಿ ನಿಲಯಗಳಲ್ಲಿ ಮೆನು ಚಾಟ್ ಪ್ರಕಾರ ರುಚಿಯಾಗಿ ಅಡುಗೆ ತಯಾರಿಸುತ್ತಿಲ್ಲ. ವಸತಿ ನಿಲಯಗಳ ಅಶುದ್ಧತೆಯಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ರೋಗಗಳಿಗೆ ತುತ್ತಾಗುವಂತಾಗಿದೆ. ಗ್ರಂಥಾಲಯವಿದ್ದರೂ ಸಾಕಷ್ಟು ಪುಸ್ತಕಗಳಿಲ್ಲ. ಇದರಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಿಂದ ವಂಚಿತರಾಗಿದ್ದಾರೆ” ಎಂದು ಆರೋಪಿಸಿದರು.
“ವಸತಿ ನಿಲಯಗಳಲ್ಲಿ ಹಳೆಯ ವಿದ್ಯಾರ್ಥಿಗಳು ಈಗಲೂ ಕೂಡಾ ಅನಧಿಕೃತವಾಗಿ ಪ್ರವೇಶ ಪಡೆದಿದ್ದು, ಈಗಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವನ್ನೂ ನಡೆಸುತ್ತಿದ್ದಾರೆ. ನಿಗದಿಗಿಂತ ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಸೇರಿದ್ದರಿಂದ ಮಂಚಗಳನ್ನು ಹೊರಗೆ ಹಾಕಿ ನೆಲದ ಮೇಲೆ ಹಾಸಿಗೆ ಹಾಕಿದ್ದಾರೆ. ಬಹುತೇಕ ಹಾಸಿಗೆ ಬಟ್ಟೆಗಳು ಹರಿದಿದ್ದರೂ ಬದಲಾಯಿಸುತ್ತಿಲ್ಲ. ವಸತಿ ನಿಲಯದ ಸಮಸ್ಯೆಗಳ ಬಗ್ಗೆ ವಾರ್ಡನ್‌ಗೆ ಹೇಳಿದರೆ ಸ್ಪಂದಿಸುತ್ತಿಲ್ಲವೆಂದು ವಿದ್ಯಾರ್ಥಿಗಳು ಹಲವು ಬಾರಿ ದೂರು ನೀಡಿದರೂ ತಪ್ಪಿತಸ್ತರ ವಿರುದ್ಧ ಕ್ರಮವಾಗಿಲ್ಲ” ಎಂದರು.
“ವಸತಿ ನಿಲಯಗಳ ನಿರ್ವಹಣೆಯ ಹೊಣೆಹೊತ್ತವರು ಸರಿಯಾದ ಸವಲತ್ತು ನೀಡದೇ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ನಡುವೆ ಗುಂಪುಗಾರಿಕೆ ಮಾಡಿ ಎತ್ತಿಕಟ್ಟಲಾಗುತ್ತಿದೆ. ಅನೇಕ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಯೇ ಇಲ್ಲ ಮತ್ತು ಇದ್ದರೂ ಸಹ ಕಾರ್ಯರೂಪದಲ್ಲಿಲ್ಲ. ಸುಸಜ್ಜಿತವಾಗಿ ನಿರ್ವಹಣೆ ಮಾಡದಿರುವದ ಕಾರಣ ಅಳಸಿದ ಅನ್ನ, ತ್ಯಾಜ್ಯ ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ತ್ಯಾಜ್ಯ ತಿನ್ನಲು ವಸತಿನಿಲಯಕ್ಕೆ ಬರುತ್ತಿರುವ ಮಂಗಗಳು, ನಾಯಿಗಳ ಹಾವಳಿ ಹೆಚ್ಚಾಗಿದೆ” ಎಂದರು.
“ವಸತಿ ನಿಲಯಗಳಲ್ಲಿ ಸರಿಯಾಗಿ ಕುಡಿಯಲು ನೀರಿನ ಸೌಕರ್ಯವಿಲ್ಲ. ಪ್ರತಿಯೊಂದು ವಸತಿ ನಿಲಯದಲ್ಲಿ ನೀರಿನ ಘಟಕ ಇರಬೇಕೆಂಬ ನಿಯಮವಿದ್ದರೂ ಪಾಲನೆ ಮಾಡುತ್ತಿಲ್ಲ. ಹೊರಗಡೆ ಖಾಸಗಿ ಕುಡಿಯುವ ನೀರಿನ ಘಟಕಕ್ಕೆ ಹೋಗಿ ಕ್ಯಾನ್ ಹೊತ್ತು ತರಬೇಕಾದ ಪರಿಸ್ಥಿತಿಯಿದೆಯೆಂದು ವಿದ್ಯಾರ್ಥಿಗಳು ನೀರಿನ ಸಮಸ್ಯೆ ತಿಳಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಾಸ್ಟೆಲ್‌ಗಳ ಅಡುಗೆ ಸಿಬ್ಬಂದಿಯವರು ದುಡಿಮೆಗೆ ಸರಿಯಾದ ತಿಂಗಳ ವೇತನ ಸಿಗದಿದ್ದಕ್ಕೆ ಅವರೂ ಕೂಡಾ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ. ಆಯಾ ವಸತಿ ನಿಲಯಗಳ ವಾರ್ಡನ್‌ಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಅಮಾಯಕ ವಿದ್ಯಾರ್ಥಿಗಳು ಬಲಿಪಶುಗಳಾಗುವ ದುಃಸ್ಥಿತಿ ಬಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ವೈಭವಯುತ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ
“ಜಿಲ್ಲಾಧಿಕಾರಿಗಳು ಯಾವುದೇ ರೀತಿ ಮುನ್ಸೂಚನೆ ನೀಡದೆ ವಾರಕ್ಕೆ ಒಂದು ವಸತಿ ನಿಲಯಕ್ಕೆ ದಿಢೀರನೆ ಭೇಟಿ ಕೊಟ್ಟು ಅಲ್ಲಿನ ವಸ್ತುಸ್ಥಿತಿಯನ್ನು ಅರಿಯಬೇಕು. ವಸತಿ ನಿಲಯಗಳ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್‌ವೈಎಫ್‌ಐ ಜಿಲ್ಲಾ ಮುಖಂಡ ಅಜೀಜ್ ಜಾಗೀರ್ದಾರ್, ನಿರಂಜನ್ ಕುಮಾರ್, ರವಿಚಂದ್ರಯಲ್ಲಪ್ಪ, ಹನೀಫ್ ಅಬಕಾರಿ ರೈತ ಮುಖಂಡ, ಮಹೇಂದ್ರ ಸೇರಿದಂತೆ ಇತರರು ಹಾಜರಿದ್ದರು.
