ಸಾರ್ವಜನಿಕರು ಎಲ್ಲಿಯವರೆಗೆ ಸ್ವಚ್ಛತೆಗೆ ಕೈ ಜೋಡಿಸುವುದಿಲ್ಲವೋ ಅಲ್ಲಿಯವರೆಗೆ ಸ್ವಚ್ಛತಾ ಕಾರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಶಿವರಾಜ ಪಾಟೀಲ್ ಹೇಳಿದರು.
ರಾಯಚೂರು ನಗರದ ರೈಲ್ವೆ ನಿಲ್ದಾಣದ ವೃತ್ತದಲ್ಲಿ ನಗರಸಭೆ ಆಯೋಜಿಸಿದ್ದ ʼಸ್ವಚ್ಛತೆಯೇ ಸೇವೆ, ತ್ಯಾಜ್ಯ ಮುಕ್ತ ಭಾರತʼ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಸ್ವಚ್ಚತೆ ಕಾರ್ಯಕ್ರಮ ಸಾಂಕೇತಿಕವಾಗಿ ಒಂದು ದಿನಕ್ಕೆ ಸೀಮಿತವಾಗದೆ. ಆದರೆ, ನಿರಂತರವಾಗಿ ಪ್ರತಿದಿನ ಸ್ವಚ್ಛತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ಕಾಪಾಡುವುದರ ಜೊತೆಗೆ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರೂ ಸ್ವಚ್ಚತೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸ್ವಚ್ಛತೆಯೇ ಸೇವೆ ತ್ಯಾಜ್ಯ ಮುಕ್ತ ಭಾರತ ಕಾರ್ಯಕ್ರಮಕ್ಕೆ ಪ್ರಧಾನಿ ಮಂತ್ರಿಯವರು ಕರೆ ನೀಡಿದ್ದಾರೆ” ಎಂದರು.
“ದೇಶಾದ್ಯಂತ ಬೆಳಿಗ್ಗೆ ಒಂದು ಘಂಟೆಗಳ ಕಾಲ ಪ್ರತಿಯಬ್ಬರೂ ತಮ್ಮ ಬಡಾವಣೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ಸದಸ್ಯರು ಪಕ್ಷಾತೀತವಾಗಿ ಹಲವೆಡೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಚತೆಯಲ್ಲಿ ತೊಡಗಿದ್ದಾರೆ” ಎಂದರು.
“ನಗರಸಭೆಯ ಪೌರಕಾರ್ಮಿಕರು ನಿತ್ಯ ಬೆಳಿಗ್ಗೆಯಿಂದ ಸ್ವಚ್ಛತೆಯಲ್ಲಿ ತೊಡಗುತ್ತಾರೆ. ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಚ್ಚತೆ ಮಾಡುವುದು ನಮ್ಮ ಕರ್ತವ್ಯ ನಮ್ಮ ಮನೆಯಲ್ಲಿ ಬಡಾವಣೆಯಲ್ಲಿ ಹಾಗೂ ಅಂಗಡಿಯಲ್ಲಿ ಮತ್ತು ವಿವಿಧ ಪ್ರದೇಶದಲ್ಲಿ ಕಸವನ್ನು ಸಂಗ್ರಹಿಸಿ ನಗರಸಭೆಗೆ ನೀಡಬೇಕು. ಕಸವನ್ನು ನಾವೇ ನಗರಸಭೆಗೆ ಹಾಕದಿದ್ದಲ್ಲಿ ಸ್ವಚ್ಛತೆ ಅಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬರಪೀಡಿತ ತಾಲೂಕುಗಳಿಗೆ ಶೀಘ್ರ ಪರಿಹಾರ ಹಣ ಬಿಡುಗಡೆಗೆ ರೈತ ಸಂಘ ಒತ್ತಾಯ
“ನಮ್ಮ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ನಗರದಲ್ಲಿ ಪ್ರತಿಯೊಬ್ಬ ವ್ಯಾಪಾರಿಗಳೂ ಕಸವನ್ನು ಬಿಸಾಡದೆ ಸಂಗ್ರಹಿಸಿ ಒಂದೆಡೆ ಹಾಕುವ ಕೆಲಸ ಮಾಡಬೇಕಾಗಿದೆ. ಈ ಕುರಿತು ನಗರಸಭೆಯು ಎಚ್ಚೆತ್ತುಕೊಂಡು ಪ್ರತಿದಿನ ಕಸ ಸಂಗ್ರಹ ಮತ್ತು ವಿಲೇವಾರಿ ಮಾಡುವ ಕೆಲಸ ಪ್ರತಿದಿನ ಮಾಡಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಸಿದ್ದಪ್ಪ ಹಿರೇಮಠ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಮುಖ್ತಿಯಾರ್, ಶಶಿರಾಜ, ಶೇಖರ, ಮಹೇಂದ್ರ ರೆಡ್ಡಿ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.
ವರದಿ : ಹಫೀಜುಲ್ಲ