ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವ ಮೂಲಕ ಅಭಿವೃದ್ದಿ ಕಾರ್ಯಗಳೊಂದಿಗೆ ನಾವು ನೀಡಿದ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ರಾಜ್ಯದಲ್ಲಿ ನುಡಿದಂತೆ ನಡೆದ ಸರ್ಕಾರ ಎಂದರೆ ನಮ್ಮ ಸರ್ಕಾರ. ಇನ್ನು ಹೆಚ್ಚಿನ ಅನುದಾನವನ್ನು ಈ ಭಾಗದ ಅಭಿವೃದ್ಧಿಗಾಗಿ ತರಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎನ್ ಎಸ್ ಬೋಸರಾಜು ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆಯಡಿ 14 ಕೋಟಿ 96 ಲಕ್ಷದ 10 ಸಾವಿರ ರೂಗಳ ವೆಚ್ಚದಲ್ಲಿ ಸಿಸಿ ರಸ್ತೆ, ಶಾಲೆಗಳಿಗೆ ಹೆಚ್ಚುವರಿ ಕೊಠಡಿ, ಹೊಸ ಅಂಗನವಾಡಿ ಕಟ್ಟಡ, ಬಸ್ ಶೆಲ್ಟರ್ ಸೇರಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಪೂಜೆ ಸಲ್ಲಿಸಿ ಮಾತನಾಡಿದರು.
ಶಾಸಕ ಹಂಪಯ್ಯ ನಾಯಕ್ ಮಾತನಾಡಿ, “ನೀವು ಸುಮಾರು 50 ವರ್ಷದಿಂದ ನಮ್ಮ ಮೇಲೆ ವಿಶ್ವಾಸವಿಟ್ಟು ಆಶೀರ್ವಾದ ಮಾಡುತ್ತಾ ಬಂದಿದ್ಧೀರಿ. ಅದಕ್ಕಾಗಿ ನಮ್ಮ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ತರುವ ಮೂಲಕ ಎಲ್ಲ ಭಾಗದಲ್ಲಿ ಹಂಚಿಕೆ ಮಾಡುತ್ತಿದ್ದೇವೆ. ಈ ಭಾಗದ ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಗಳಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ತರಲಾಗುವುದು” ಎಂದು ಭರವಸೆ ನೀಡಿದರು.
ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿಯಲ್ಲಿ ₹25 ಲಕ್ಷ ವೆಚ್ಚದಲ್ಲಿ ಬಸ್ ಶೆಲ್ಟರ್, ₹15 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ, ₹15 ಲಕ್ಷ ಸಿಸಿ ರಸ್ತೆ ಹಾಗೂ ಮೈಕ್ರೋ ಯೋಜನೆಯಡಿ ₹10 ಲಕ್ಷದ 3 ಸಿಸಿ ರಸ್ತೆ, ₹50 ಲಕ್ಷ ಅಡುಗೆ ಕೋಣೆ ಕಾಮಗಾರಿಗಳು ಸೇರಿದಂತೆ 1 ಕೋಟಿ 88 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮಾನ್ವಿ ತಾಲೂಕು ಕೇಂದ್ರದ ಟೌನ್ ಹಾಲ್‌ಗೆ ₹25 ಲಕ್ಷದ ಪೀಠೋಪಕರಣಗಳು, ಅಂಗನವಾಡಿ ಕೇಂದ್ರಕ್ಕೆ ₹15 ಲಕ್ಷ , ಕೋನಾಪೂರ ಪೇಟೆಯಲ್ಲಿ ಹೈಟೆಕ್ ಶೌಚಾಲಯಕ್ಕೆ ₹20 ಲಕ್ಷ, ಸಣ್ಣ ಬಜಾರ್, ಅಂಬೇಡ್ಕರ್ ನಗರ ಸರ್ಕಾರಿ ಶಾಲೆಗಳಿಗೆ ತಲಾ ₹27 ಲಕ್ಷದ ಕೊಠಡಿಗಳು, ಸೋನಿಯಾಗಾಂಧಿ ನಗರ ಶಾಲೆಗೆ ₹26.68 ಲಕ್ಷದಲ್ಲಿ ಎರಡು ಕೊಠಡಿಗಳು, ಬಾಜಿವಾಡ ಶಾಲೆಗೆ ₹13.90 ಲಕ್ಷದಲ್ಲಿ ಒಂದು ಹೆಚ್ಚುವರಿ ಕೊಠಡಿ ಸೇರಿದಂತೆ ಒಟ್ಟು 14 ಕೋಟಿ 68 ಲಕ್ಷ ರೂಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಅಮರೇಶ್ವರ ಕ್ಯಾಂಪ್‌ನಲ್ಲಿ ಸಿಸಿ ರಸ್ತೆಗೆ ₹10 ಲಕ್ಷ, ಶಾಲಾ ಕೊಠಡಿಗೆ ₹14 ಲಕ್ಷ, ಪೋತ್ನಾಳದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ₹25 ಲಕ್ಷ, ಮೂರು ಸಿಸಿ ರಸ್ತೆಗಳ ನಿರ್ಮಾಣಕ್ಕೆ ₹30 ಲಕ್ಷ, ಮುದ್ದಂಗುಡ್ಡಿಯಲ್ಲಿ ಎರಡು ಶಾಲಾ ಕೊಠಡಿಗಳಿಗೆ ₹27 ಲಕ್ಷ, ಖರಾಬ್ ದಿನ್ನಿಯಲ್ಲಿ ಸಿಸಿ ರಸ್ತೆಗೆ ₹10 ಲಕ್ಷ, ದೇವಿಪುರದಲ್ಲಿ ಸಿಸಿ ರಸ್ತೆಗೆ ₹10 ಲಕ್ಷ, ಚಿಕ್ಕಕೊಟ್ನೇಕಲ್‌ನಲ್ಲಿ ಸಿಸಿ ರಸ್ತೆಗೆ ₹10 ಲಕ್ಷ ಸೇರಿದಂತೆ ಸಿರವಾರ ತಾಲೂಕು ಕೇಂದ್ರಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ₹4 ಕೋಟಿ ₹98 ಲಕ್ಷ, 2 ಕೋಟಿ ವೆಚ್ಚದಲ್ಲಿ 6 ತರಗತಿ ಕೊಠಡಿ, ಎರಡು ಶೌಚಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ವಿವಿಐಪಿ ಗೆಸ್ಟ್ ಹೌಸ್‌ಗೆ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ
ಈ ಸಂದರ್ಭದಲ್ಲಿ ಭೀಮರಡ್ಡಿ ಕಲ್ಲೂರು, ಜಿ ಶರಣಯ್ಯ ನಾಯಕ್, ಅಮರಪ್ಪ ಗೌಡ ಕಲ್ಲೂರು, ಖಾಲಿದ್ ಗುರು, ಗಫೂರ್ ಸಾಬ್, ರುದ್ರಪ್ಪ ಅಂಗಡಿ, ಬಸವರಾಜ್ ಪಾಟೀಲ್, ರೌಡೂರು ಮಹಾಂತೇಶ ಸ್ವಾಮಿ, ಗುರುಸ್ವಾಮಿ, ಜಹಾಂಗೀರ್ ಪಾಶಾ, ಸಂಗಪ್ಪ ಗೌಡ, ಡಾ. ಶರ್ಮಾ, ಪಂಪನಗೌಡ ಪೋತ್ನಾಳ, ಬಸವರಾಜ ನಾಡಗೌಡ, ರಮೇಶ ದರ್ಶನಪೂರ, ಬ್ರಿಜ್ಜೇಶ್ ಪಾಟೀಲ್, ಅರಕೇರಿ ಶಿವಕುಮಾರ್ ಚನ್ನಪ್ಪ, ಮಾನ್ವಿ ಪುರಸಭೆ ಸದಸ್ಯ ಗುರುಸ್ವಾಮಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.
ವರದಿ : ಹಫೀಜುಲ್ಲ
