ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಹೇಳಿದರು
ಪತ್ರಿಕಾ ಹೇಳಿಕೆ ನೀಡಿ ಛಲವಾದಿ ನಾರಾಯಣಸ್ವಾಮಿ ಇತ್ತೀಚಿಗೆ ಕಲಬುರಗಿಗೆ ಭೇಟಿ ನೀಡಿದಾಗ ಪ್ರಿಯಾಂಕ್ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ನಾಲಿಗೆ ಹರಿಬಿಟ್ಟು ಅವಾಚ್ಯ ಪದಗಳಿಂದ ಮಾತನಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.
ಛಲುವಾದಿ ನಾರಾಯಣಸ್ವಾಮಿಯವರು ಕಳೆದ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರ ನೆರಳಿನಲ್ಲಿ ರಾಜಕೀಯವಾಗಿ ಬೆಳೆದು ಹಾಗೂ ಹಲವು ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಗಟ್ಟಿಯಾಗಿ ಹೀಗೆ ಮಾತನಾಡುವುದು ಸರಿಯಾದುದಲ್ಲ ಎಂದರು.
ದೇಶದ ಪ್ರಧಾನ ಮಂತ್ರಿಗಳನ್ನು ಪ್ರಶ್ನೆ ಮಾಡಲು ಪ್ರಿಯಾಂಕ್ ಯಾರು ಎಂದು ಕೇಳಿರುವ ಚಲುವಾದಿ ನಾರಾಯಣಸ್ವಾಮಿಯವರು ದೇಶದ ಪ್ರಜಾಪ್ರಭುತ್ವದ ತಳಹದಿ ಮರೆತಿದ್ದಾರೆ.ಬಿಜೆಪಿಯ ಮನುವಾದಿಗಳು ಟೀಕಿಸುವ ಮೂಲಕ ತಮ್ಮ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾಳೆಯಿಂದ ಚಿಂತನ-ಮಂಥನ ಕಾರ್ಯಕ್ರಮ
ದೇಶದ ಸಾಮಾನ್ಯ ನಾಗರಿಕ ಕೂಡ ಪ್ರಧಾನ ಮಂತ್ರಿಗಳನ್ನು ಪ್ರಶ್ನೆ ಮಾಡಬಹುದು.ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ ಇರುವವರು ಯಾರೇ ಆಗಲಿ ಹಾಗೂ ಉನ್ನತ ದರ್ಜೆಯಲ್ಲಿರಲಿ ಸಾಮಾನ್ಯ ಪ್ರಜೆಗೆ ಉತ್ತರಿಸಬೇಕಾಗುತ್ತದೆ ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದಿರುವಂತಹ ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕನಾಗಿರುವದು ಈ ರಾಜ್ಯದ ದುರಂತ ಎಂದು ಕಟುವಾಗಿ ಟೀಕಿಸಿದರು.
ಛಲುವಾದಿ ನಾರಾಯಣಸ್ವಾಮಿಯವರು ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರನ್ನು ಖುಷಿಪಡಿಸಲು ಸಲುವಾಗಿ ಇಲ್ಲಸಲ್ಲದ ಹೇಳಿಕೆ ನೀಡಿದ್ದು ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲಿಯೇ ಪ್ರಯಾಣ ಬೆಳೆಸಿದರು ಕಾಂಗ್ರೆಸ್ ಕಾರ್ಯಕರ್ತರಿಂದ ಹಾಗೂ ಖರ್ಗೆ ಅಭಿಮಾನಿಗಳಿಂದ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
