ಕೇಂದ್ರ ಸರಕಾರವು ಎರಡು ಬಾರಿ ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಒಟ್ಟುಗೂಡಿದ ಜಿಲ್ಲಾ ಘಟಕದ ಕಾಂಗ್ರೆಸ್ ಪದಾಧಿಕಾರಿಗಳು, ‘ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ನೀಡಿದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ನೀಡದೆ, ಕೇವಲ ಬಿಜೆಪಿ ಮಿತ್ರಪಕ್ಷಗಳ ಆಡಳಿತದಲ್ಲಿರುವ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಬಹುಪಾಲು ತೆರಿಗೆ ಪಾವತಿಯಾಗುತ್ತಿದೆ. ಆದರೆ, ರಾಜ್ಯಕ್ಕೆ ಮರಳಿ ಖಾಲಿ ಚೊಂಬು ಬರುತ್ತಿದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆ ಖಂಡನೀಯ. ಹಿಂದೆ ರಾಜ್ಯ ಬರಬೇಕಾದ ತೆರಿಗೆ ಪಾಲು ಪಡೆಯಲು ನ್ಯಾಯಾಲಯದ ಮೂಲಕ ಹೋರಾಟ ನಡೆಸಲಾಗಿತ್ತು. ಈಗಲೂ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಮುಂದುವರಿದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ದಾವಣಗೆರೆ | ದಿಢೀರ್ ಕುಸಿದ ಶಾಲೆಯ ಮೇಲ್ಛಾವಣಿ; ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಜಯಣ್ಣ, ಶಾಂತಪ್ಪ, ಬಸವರಾಜ ರೆಡ್ಡಿ, ಭೀಮನಗೌಡ ನಾಗಡದಿನ್ನಿ, ಜಿಂದಪ್ಪ, ಅಮರೇಗೌಡ ಹಂಚಿನಾಳ, ಪವನ್ ಪಾಟೀಲ, ನಾಗವೇಣಿ ಪಾಟೀಲ, ಮಾಲಾ ಭಜಂತ್ರಿ, ರಾಣಿ ರಿಚರ್ಡ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
