ರಾಜ್ಯ ಸರ್ಕಾರ ಹೊಸದಾಗಿ ರೂಪಿಸಲು ಹೊರಟಿರುವ ಕೈಗಾರಿಕಾ ನೀತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶೇ.30 ನಿವೇಶನ ಖರೀದಿಗೆ ವಿನಾಯಿತಿ ನೀಡುವುದು ಹಾಗೂ ಹೊಸ ಕೈಗಾರಿಕೆಗಳಿಗೆ ಎಪಿಎಂಸಿ ಸೆಸ್ ವಿನಾಯಿತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನಲ್ಲಿ ಪೂರ್ವ ಸಿದ್ದತಾ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಕಾಟನ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ವಿ ಲಕ್ಷ್ಮೀರೆಡ್ಡಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತಾನಾಡಿ, “ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ರಿಯಾಯತಿ ನೀಡಿದಲ್ಲಿ ಕೈಗಾರಿಕಾ ವಲಯದ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಸಿಜನಲ್ ಇಂಡಸ್ಟ್ರೀಸ್‌ಗಳಿಗೆ ರೂಫ್ ಟಾಪ್ ಸೋಲಾರ್ ಅಳವಡಿಕಗೆ ಶೇ.25ರಷ್ಟು ಪ್ರೋತ್ಸಾಹ ಧನ ನೀಡುವುದು, ಪ್ರತಿ ಯೂನಿಟ್‌ಗೆ ₹5.25 ನೀಡಿ ಕ್ಯಾರಿ ಫಾರ್ವಡ್ ಮಾಡಿದಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಬಳಕೆ ಸಹಕಾರಿಯಾಗಲಿದೆ” ಎಂದರು.
“2014-19 ಕೈಗಾರಿಕಾ ನೀತಿಯಲ್ಲಿ ಇರುವಂತೆ ಎಪಿಎಂಸಿ ಸೆಸ್ ವಿನಾಯಿತಿ ನೀಡಲು ಮನವಿ ಮಾಡಲಾಗಿದೆ. ವೇರ್‌ಹೌಸ್ ಮತ್ತು ಲಾಜೆಸ್ಟಿಕ್ ಚಟುವಟಿಕೆಗಳಿಗೆ ಕೆಐಎಡಿಬಿ ಕೈಗಾರಿಕೆ ಪ್ರದೇಶ ಕನಿಷ್ಟ 50 ಸಾವಿರ ಚದುರ ಅಡಿ ಯಂತ್ರೋಪಕರಣ ಆಧಾರದ ಮೇಲೆ ಸಣ್ಣ ಘಟಕವೆಂದು ಪರಿಗಣಿಸಲಾಗಿರುವುದನ್ನು ಪರಿಷ್ಕರಿಸಿ 5 ಸಾವಿರ ಚದುರ ಅಡಿಯಿಂದ 1 ಲಕ್ಷ ಚದುರ ಅಡಿ ಕಟ್ಟಡ ನಿರ್ಮಿಸಿದರೆ ಸಹಾಯಧನ ನೀಡಬೇಕೆಂದು ಮನವಿ ಮಾಡಲಾಗಿದೆ” ಎಂದು ತಿಳಿಸಿದರು.
ಕಾಟನ್ ಜಿನ್ನಿಂಗ್ ಫಾಕ್ಟರಿಗಳಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದಲೇ ರಿಯಾಯಿತಿ ತಲುಪಿಸಬೇಕಿದೆ. ಜವಳಿ ಇಲಾಖೆಯಿಂದ ಪಡೆಯುವಂತೆ ಹೇಳುತ್ತಿರುವುದನ್ನು ತಪ್ಪಿಸಿ ಎಲ್ಲ ಸ್ಟಾಂಪ್‌ಡ್ಯೂಟಿ, ಸಹಾಯಧನ, ವಿದ್ಯುತ್ ತೆರಿಗೆಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಪಡೆಯುವಂತೆ ನೀತಿ ರೂಪಿಸಬೇಕು” ಎಂದರು.
“ಸಿರಿಧಾನ್ಯ ತಯಾರಿಕೆ ಘಟಕಗಳಿಗೆ ಪ್ರೋತ್ಸಾಹ, ರಿಯಾಯಿತಿ ನೀಡುವುದು, ಆಹಾರ ಧಾನ್ಯಗಳ ಶೇಖರಣೆಗ ಸೈಲೋಸ್ ನಿರ್ಮಾಣ, ಎಂಎಸ್‌ಎಂಇ ಘಟಕಗಳಿಗೆ ಇಟಿಪಿ ಸಹಾಯಧನ ಮೊತ್ತ ಹೆಚ್ಚಿಸುವುದು, ಮಳೆ ನೀರು ಕೊಯ್ಲು ಅಳವಡಿಸಲು ಹೆಚ್ಚಿನ ಒತ್ತು ನೀಡುವುದು, ಉದ್ಯೋಗ ಮಿತ್ರದಿಂದ ಆಗುತ್ತಿರುವ ತೊಂದರೆ ನಿವಾರಿಸಲು ಗಮನ ಸೆಳೆಯಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾದಕ ವಸ್ತುಗಳ ದುರುಪಯೋಗ, ಕಳ್ಳ ಸಾಗಣಿಕೆ ವಿರುದ್ಧ ಜಾಗೃತಿ ಅಭಿಯಾನದ ಪ್ರತಿಜ್ಞೆ ಸ್ವೀಕಾರ
“ರಾಯಚೂರು ಗ್ರೋಥ್ ಸೆಂಟರ್‌ಗಳಲ್ಲಿ ಪೊಲೀಸ್ ಠಾಣಾ ಮಂಜೂರು ಆಗಿದ್ದು, ಅಗ್ನಿ ಶಾಮಕ ಠಾಣೆ ಸ್ಥಾಪಿಸಲು ಮನವಿ ಮಾಡಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿಯೇ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ” ಎಂದರು.
ಪದಾಧಿಕಾರಿಗಳಾದ ಶ್ರೇಣ ಕರಾಜ ಮೂಥಾ, ರವಿ, ರಾಮಾನುಜ, ಆನಂದ, ಬಿ ಆನಂದರೆಡ್ಡಿ ಇದ್ದರು.
ವರದಿ : ಹಫೀಜುಲ್ಲ
