ಅನೇಕ ವರ್ಷಗಳಿಂದ ಸಫಾಯಿ ಕರ್ಮಚಾರಿ ಸಮೂದಾಯಕ್ಕೆ ಮೀಸಲಿಟ್ಟ ಸ್ಮಶಾನ ಭೂಮಿಯ ಒತ್ತುವರಿ ತೆರವುಗೊಳಿಸಿ ಸಮುದಾಯದ ಕಲ್ಯಾಣ ಮಂಟಪ ಕಾಮಗಾರಿ ಮುಂದುವರೆಸಲು ಮುಂದಾಗಿರುವ ಜಿಲ್ಲಾಧಿಕಾರಿ ನಿತೀಶ್ ಕ್ರಮ ಸ್ವಾಗತಾರ್ಹ. ಜತೆಗೆ ಸಫಾಯಿ ಕರ್ಮಚಾರಿಗಳಿಗೆ ನಿವೇಶನವನ್ನೂ ನೀಡಬೇಕು ಎಂದು ದಲಿತ ಮಹಾಸಭಾದ ಜಿಲ್ಲಾಧ್ಯಕ್ಷ ಕೆ ಇ ಕುಮಾರ ಮನವಿ ಮಾಡಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ಸಫಾಯಿ ಕರ್ಮಚಾರಿ ಸಮುದಾಯ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಆಗ್ರಹಿಸಿ ಗೀತಾ ಸಿಂಗ್ ಅವರ ನೇತೃತ್ವದಲ್ಲಿ ಅನೇಕ ಹಂತದ ಹೋರಾಟ ನಡೆಸಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಮೈಮೇಲೆ ಮಲ ಎರಚಿಕೊಂಡೂ ಕೂಡಾ ಪ್ರತಿಭಟನೆ ನಡೆಸಿದ್ದರು. ಅದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಸ್ಮಶಾನ ಭೂಮಿ ತೆರವುಗೊಳಿಸಿ ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ” ಎಂದರು.
“ಸಿಯಾತಲಾಬ್ ಬಡಾವಣೆಯಲ್ಲಿರುವ ಸಫಾಯಿ ಕರ್ಮಚಾರಿ ಸಮುದಾಯ ಭವನ ಕಾಮಗಾರಿ ಅಪೂರ್ಣವಾಗಿ ನಿಂತಿತ್ತು. ಈಗ ಕಾಮಗಾರಿ ಪೂರ್ಣಗೊಳಿಸಲು ಕೆಲಸಗಾರರಿಗೆ ಸೂಚಿಸಿದ್ದಾರೆ. ಅದೇ ರೀತಿ ಸಿಯಾತಲಾಬ್ ಬಡವಾಣೆ ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು” ಎಂದು ಮನವಿ ಮಾಡಿದರು.
ಸರ್ವೆ 33ರಲ್ಲಿ 15 ಎಕರೆ 20ಗುಂಟೆ ಸರ್ಕಾರಿ ಜಮೀನಿದ್ದು, ಕೆರೆಯನ್ನು ಅತಿಕ್ರಮಿಸಲಾಗಿದೆ. ಒತ್ತುವರಿಗೆ ನಗರಸಭೆ ಸದಸ್ಯರುಗಳು ಹಾಗೂ ಪೌರಾಯುಕ್ತರುಗಳೇ ಕಾರಣರಾಗಿದ್ದಾರೆ. ಬಡಾವಣೆ ನಗರಸಭೆ ಸದಸ್ಯರು ಒತ್ತುವರಿ ವಿರುದ್ದ ಯಾರೊಬ್ಬರೂ ಮಾತನಾಡದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ಜಮೀನು, ಕೆರೆ ಒತ್ತುವರಿ ಹಾಗೂ ಉದ್ಯಾವನಗಳ ಒತ್ತುವರಿಯನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ಜಾಥಾ
“ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ, ಶಾಸಕ ಡಾ.ಶಿವರಾಜ ಪಾಟಿಲ್ ಸೇರಿದಂತೆ ಉಸ್ತುವಾರಿ ಸಚಿವರು ಸಿಯಾತಲಾಬ್ ಬಡಾವಣೆ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ಸದಸ್ಯೆ ಗೀತಾಸಿಂಗ್, ಅನಿತಾ ಸೇರಿದಂತೆ ಇತರರು ಇದ್ದರು.