ಕೊಪ್ಪಳ ಜಿಲ್ಲೆಯ ಸಂಗನಹಾಲ ಗ್ರಾಮದಲ್ಲಿ ಕ್ಷೌರ ನಿರಾಕರಿಸಿ ದಲಿತ ಯುವಕನ ಕೊಲೆ ಮಾಡಿದ ಆರೋಪಿ ಮುದುಕಪ್ಪ ಹಡಪದ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲೆಯ ಬಿ ಆರ್ ಅಂಬೇಡ್ಕರ್ ಸೇನಾ ಸಮಿತಿ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಕೊಪ್ಪಳ ಜಿಲ್ಲೆಯಾದ್ಯಂತ ಅಸೃಶ್ಯತೆ ಆಚರಣೆ, ಜಾತೀಯತೆ ಪ್ರಕರಣಗಳು ದಿನನಿತ್ಯ ಹೆಚ್ಚಾಗಿ ಕಂಡುಬರುತ್ತಿವೆ. ಇಂತಹ ಘಟನೆಗಳಿಗೆ ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಪಾಲನೆ ಹೊರಡಿಸಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳು ಕಳೆದರೂ ಸಮಾಜದಲ್ಲಿ ದಲಿತ ಹೆಣ್ಣು ಮಕ್ಕಳ, ದಲಿತರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ , ಕೊಲೆ ಪದೇ ಪದೇ ನಡೆಯುತ್ತಿವೆ ಎಂದು ದೂರಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗನಹಾಲ ಗ್ರಾಮದಲ್ಲಿ ಕ್ಷೌರ ಮಾಡಲು ನಿರಾಕರಿಸಿ ಕ್ಷೌರ ಮಾಡುವ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿ ಕೊಲೆಗೈದ ಘಟನೆ, ಇಡೀ ದೇಶ ಯಾವ ಕಡೆ ಸಾಗುತ್ತಿದೆ ಎಂಬುದರ ಸೂಚನೆ. ಹಾಗಾಗಿ, ಆರೋಪಿಗೆ ಗಲ್ಲುಶಿಕ್ಷೆಯಾಗುವಂತೆ ಮಾಡಬೇಕು. ಆ ಮೂಲಕ ಅಸೃಶ್ಯತೆ ಆಚರಣೆ ನಿಲ್ಲಬೇಕು. ಜೊತೆಗೆ ಯುವಕನ ಕುಟುಂಬಕ್ಕೆ 05 ಎಕರೆ ಜಮೀನನ್ನು ಸರ್ಕಾರವು ಪರಿಹಾರವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಜನ ಸಂಪರ್ಕ ಸಭೆ; ಎಸ್‌ಪಿ ಮಿಥುನ್ ಕುಮಾರ್ ಭಾಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿ ತಿಂಗಳು ಎಸ್ ಸಿ ಎಸ್ ಟಿ ದೌರ್ಜನ್ಯ ಎಂಬ ವಿಷಯದ ಸಭೆ ಕರೆದು ಜನರಿಗೆ ಜಾತಿ ತಾರತಮ್ಯದ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದು ಮನವಿಯಲ್ಲಿ ಮಾಡಿದರು.
ಈ ವೇಳೆ ಕಲ್ಯಾಣ್ ಕರ್ನಾಟಕ ಮುಖಂಡರಾದ ಸದಾನಂದ ಮಾನ್ವಿ, ರಂಗಪ್ಪ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಆನಂದ್ ಏಗನೂರು, ರಮೇಶ್ ಸಿರವಾರ, ರಾಜು ಆಶಾಪುರ, ಶಾಂತಕುಮಾರ್ ಇನ್ನಿತರರು ಹಾಜರಿದ್ದರು.
