ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಿಬ್ಬಂದಿ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಮೀನಾಮೇಷ ಎಣಿಸುತ್ತಿರುವುದರಿಂದ ಗ್ರಾಮದ ನಾಲ್ಕನೇ ವಾರ್ಡಿನ ಮಹಿಳೆಯರು ಸೋಮವಾರ ಖಾಲಿ ಕೊಡಗಳೊಂದಿಗೆ ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
“ಕೊಳವೆ ಬಾವಿ ಕೊರೆಸಿ ಹಲವು ದಿನ ಕಳೆದರೂ ಈವರೆಗೂ ಬಡಾವಣೆಯ ಮನೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಕೊಡ ನೀರಿಗಾಗಿ ಮಕ್ಕಳು ಮತ್ತು ಮಹಿಳೆಯರು ಹಗಲು ರಾತ್ರಿ ಎನ್ನದೆ ನೀರು ಸಂಗ್ರಹ ಮಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
“ಗ್ರಾಮದ ನಾಲ್ಕನೇ ವಾರ್ಡಿನಲ್ಲಿರುವ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ನೀರಿನ ತೊಂದರೆ ಉಂಟಾಗಿದೆ. ನೀರಿನ ಸಮಸ್ಯೆಯನ್ನು ಸರಿಪಡಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರೂ ಕೂಡಾ ಇಲ್ಲಿನ ನಿವಾಸಿಗಳ ಬೇಡಿಕೆ ಈಡೇರಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ” ಎಂದು ಪ್ರತಿಭಟನಕಾರರು ದೂರಿದರು.
ಸಿಬ್ಬಂದಿಗಳ ಹಿಂದೇಟು: ಗ್ರಾಮ ಪಂಚಾಯಿತಿ ಎದುರು ಮಹಿಳೆಯರು ಬಿರು ಬಿಸಿಲಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಪ್ರತಿಭಟನೆ ನಡೆಸಿದರು. ಮಹಿಳೆಯರ ಮನವಿ ಸ್ವೀಕರಿಸಲು ಗ್ರಾಮ ಪಂಚಾಯಿತಿಯ ಯಾವೊಬ್ಬ ಸಿಬ್ಬಂದಿಯೂ ಮುಂದೆ ಬರಲಿಲ್ಲ. ನಿವಾಸಿಗಳ ಮನವಿ ತೆಗೆದುಕೊಳ್ಳಲು ಹಿಂದೇಟು ಹಾಕಿದ ಪ್ರಸಂಗ ಜರುಗಿತು. ಮಹಿಳೆಯರ ಒತ್ತಡಕ್ಕೆ ಮಣಿದ ಕರ ವಸೂಲಿಗಾರ ಅಯ್ಯಪ್ಪ ನಿವಾಸಿಗಳ ಮನವಿ ಸ್ವೀಕರಿಸಿದ್ದಾರೆ.
ಪ್ರತಿಭಟನಾಕಾರರಿಂದ ಛೀಮಾರಿ: ಗ್ರಮ ಪಂಚಾಯಿತಿಯ ಸಿಬ್ಬಂದಿಗಳ ನಡೆಗೆ ಪ್ರತಿಭಟನಾನಿರತ ಮಹಿಳೆಯರು ಛೀಮಾರಿ ಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾತ್ರಿಯಿಡೀ ಸುರಿದ ಮಳೆಯಿಂದ ತೋಯ್ದ ಭತ್ತ; ಜನಜೀವನ ಅಸ್ತವ್ಯಸ್ಥ
ಈ ಸಂದರ್ಭದಲ್ಲಿ ಖಾಜಮ್ಮ, ಹಾಜರಾಬೀ, ಹುಸೇನ್ ಬೀ, ಖಾಜಮುನ್ನ, ಹುಸೇನಾ, ಜನ್ನತ್ ಬೀ, ಬಂದೇನವಾಜ್, ಮಹಿಬೂಬ್, ಭಾಷಾಸಾಬ್, ಹಮೀದ್, ಬಾವಸಲಿ, ಬಾಬು ಸೇರಿದಂತೆ ಬಹುತೇಕರು ಇದ್ದರು.
ವರದಿ : ಮಲ್ಲಿಕಾರ್ಜುನ ಅತ್ತನೂರು
