ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜೀನಾಮೆ ಆಗ್ರಹಿಸಿ ಡಿಸೆಂಬರ್ 27ರಂದು ದಲಿತರಪರ ಮತ್ತು ಅಲ್ಪಸಂಖ್ಯಾತರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ದಲಿತಪರ ಮುಖಂಡ ಎಸ್ ಮಾರೆಪ್ಪ ವಕೀಲರು ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “2025ರೊಳಗೆ ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಣೆ ಮಾಡುವ ಉದ್ದೇಶದಿಂದ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಯಾಗಿ ಬಿಜೆಪಿ ನಡೆಯುತ್ತಿದೆ. ಆರ್‌ಎಸ್‌ಎಸ್ ಮತ್ತು ಮನುವಾದಿಗಳ ಮನಸ್ಥಿತಿ ಹೊಂದಿರುವ ಬಿಜೆಪಿಗರಿಗೆ ಅಂಬೇಡ್ಕರ್ ಮತ್ತು ಸಂವಿಧಾನದ ಮೇಲೆ ಕಿಂಚತ್ತೂ ಗೌರವವಿಲ್ಲ. ಇಂತಹವರು ಸಂವಿಧಾನದ ಮೇಲೆ ಪ್ರಮಾಣವಚನ ಮಾಡಬಾರದಿತ್ತು” ಎಂದು ವಾಗ್ದಾಳಿ ನಡೆಸಿದರು.
“ಈ ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ಅವರ ಮೇಲೆ ನಂಬಿಕೆ ಇಲ್ಲದಿದ್ದರೆ ಕೇಂದ್ರ ಗೃಹಸಚಿವ ಸೇರಿದಂತೆ ಯಾರೇ ಇರಲಿ ರಾಜೀನಾಮೆ ನೀಡಿ ಹೊರ ನಡೆಯಲಿ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಆರ್‌ಎಸ್‌ಎಸ್ ಮತ್ತು ಮನುವಾದಿಗಳ ಮನಸ್ಥಿತಿ ಭಾವನೆಯಾಗಿದೆ. ದೇಶ ಸೇರಿದಂತೆ ವಿದೇಶಗಳಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಇದನ್ನು ಸಹಿಸದ ಬಿಜೆಪಿಗರು ಈ ರೀತಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ” ಎಂದರು.
“ಅಂಬೇಡ್ಕರ್ ಮೇಲೆ ಇವರಿಗಿರುವ ನಿಜವಾದ ಒಳವಿಚಾರ ಅಮಿತ್ ಶಾ ಹೇಳಿಕೆ ಮೂಲಕ ಹೊರಬಿದ್ದಿದೆ. ಸಂವಿಧಾನದ ಅಡಿಯಲ್ಲಿ ನರೇಂದ್ರ ಮೋದಿ ನಂತರ ಬಹುದೊಡ್ಡ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ತಮ್ಮ ನಾಲಿಗೆ ಹರಿಬಿಡುವ ಮೂಲಕ ಈ ದೇಶದ ಬಹುಸಂಖ್ಯಾತರ ವಿರೋಧಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಅವರ ನಾಮಸ್ಮರಣೆ ನಮಗೆ ಫ್ಯಾಶನ್ ಅಲ್ಲ. ಅದು ನಮ್ಮ ಜೀವನ. ಇಂದು ನಮ್ಮ ಅಸ್ತಿತ್ವ, ನಮ್ಮ ಬದುಕು ಮತ್ತು ನಮಗಿರುವ ಸವಲತ್ತು ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಬಲದಿಂದಾಗಿ ದೊರತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಅನೇಕ ಬದಲಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ವಿಚಾರಧಾರೆ ಅಗತ್ಯವಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೇಂದ್ರ ಗೃಹಮಂತ್ರಿ ಅಮಿತ್ ಶಾ ರಾಜೀನಾಮೆಗೆ ಸಿಪಿಐ ಆಗ್ರಹ
ಅಂಬೇಡ್ಕರ್ ವಿರೋಧಿ ಚಟುವಟಿಕೆ ಅನುಸರಿಸುವ ಯಾವುದೇ ಪಕ್ಷವಿರಲಿ ಅವರಿಗೆ ತಕ್ಕ ಪಾಠ ಕಲಿಸಲು ಉತ್ತರ ಭಾರತದ ಜನರು ಇಂದಿಗೂ ಮುಂಚೂಣಿ ವಹಿಸಿಕೊಂಡಿದ್ದಾರೆ. ಅಂಬೇಡ್ಕರ್ ಅವರನ್ನು ಅವಮಾನ ಮಾಡಿರುವ ಬಿಜೆಪಿಗರಿಗೆ ತಕ್ಕಪಾಠ ಕಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರವೀಂದ್ರನಾಥ ಪಟ್ಟಿ, ಎಂ ಆರ್ ಭೇರಿ, ಜಾನ್ ವೆಸ್ಲಿ, ಹೇಮರಾಜ್ ಆಸ್ಕಿಹಾಳ್ ಸೇರಿದಂತೆ ಇತರರು ಇದ್ದರು.
