ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು 3 ಸಾವಿರ ರೂಗಳಿಗೆ ಹೆಚ್ಚಿಸುವುದು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ದೇವದಾಸಿಯರ ಸಮೀಕ್ಷೆ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಆಗ್ರಹಿಸಿತು.
ಸರ್ಕಾರವು ದೇವದಾಸಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೊಳಿಸಬೇಕು. ಉಚಿತ ನಿವೇಶನ ಹಂಚಿಕೆ ಜೊತೆಗೆ ಮನೆಯನ್ನು ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ರಾಜೀವಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಮನೆಗಳಿಗೆ ವಂತಿಗೆ ಹಣವನ್ನು ಫಲಾನುಭವಿಗಳೇ ನೀಡುವಂತೆ ಕೇಳಲಾಗುತ್ತಿದೆ. ಹಣ ಪಾವತಿಸುವ ಶಕ್ತಿ ದೇವದಾಸಿ ಮಹಿಳೆಯರಿಂದ ಸಾಧ್ಯವಿಲ್ಲ. ಸರ್ಕಾರವೇ ವಂತಿಗೆ ಹಣ ತುಂಬಿ ಮನೆ ನಿರ್ಮಿಸಿಕೊಡಬೇಕು. ದೇವದಾಸಿ ಮಹಿಳೆಯರ ಕುಟುಂಬಕ್ಕೆ ಐದು ಎಕರೆ ನೀರಾವರಿ ಭೂಮಿ ಒದಗಿಸಬೇಕು. ರಾಯಚೂರು ತಾಲೂಕಿನ ದೇವದಾಸಿ ಮಹಿಳೆಯರ ವಸತಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕೂಡಲೇ ಕಾಮಗಾರಿ ವೇಗ ಹೆಚ್ಚಿಸಬೇಕೆಂದು ಒತ್ತಾಯಿಸಿ ಸಂಘಟನೆ ಪದಾಧಿಕಾರಿಗಳು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ರಾಯಚೂರು | ವೇತನ ಪಾವತಿಗೆ ಒತ್ತಾಯಿಸಿ ಗ್ಯಾಂಗ್ ಮ್ಯಾನ್‌ಗಳ ಪ್ರತಿಭಟನೆ
ಈ ವೇಳೆ ಸಂಘಟನೆ ಗೌರವಾಧ್ಯಕ್ಷ ಕೆ.ಜಿ.ವೀರೇಶ, ಅಧ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ತಾಯಮ್ಮ, ರೇಣುಕಮ್ಮ, ಮುತ್ತಮ್ಮ ಸೇರಿದಂತೆ ಅನೇಕ ಮಹಿಳೆಯರು ಇದ್ದರು.
