ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬಿಡುಗಡೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾರತಮ್ಯ ನೀತಿ ಅನುಸರಿಸಿ ಸಂವಿಧಾನ ಬದ್ಧ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿವೆ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮಹ್ಮದ ಪೀರಸಾಬ ಆರೋಪಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಅಲ್ಪಸಂಖ್ಯಾತರ ಸಮುದಾಯಗಳಿಗೆ ಶೈಕ್ಷಣಿಕ ಅಭಿವೃದ್ದಿಗೆ ಜಾರಿಗೊಳಿಸಿದ್ದ ಶಿಷ್ಯವೇತನ ಬಿಡುಗಡೆ ಮಾಡುತ್ತಿಲ್ಲ. ಶೈಕ್ಷಣಿಕ ವರ್ಷ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳುತ್ತಿದ್ದರೂ ಶಿಷ್ಯವೇತನ ನೀಡಿಲ್ಲ. 2023-24ರ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ₹2,100 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು” ಎಂದರು.
“ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ₹1,700 ಕೋಟಿ ಹಂಚಿಕೆಯೂ ಮಾಡಿತ್ತು. ಈ ಅನುದಾನದಲ್ಲಿ ಪ್ರಿ ಮೆಟ್ರಿಕ್, ಮೆಟ್ರಿಕ್, ನ್ಯಾಷನಲ್ ಓವರ್ಸಿಸ್ ಸ್ಕಾಲರ್ ಶಿಪ್‌ಗಳಿಗೆ 160 ಕೋಟಿ ರೂ. ನೀಡಲಾಗಿದೆ. ಆದರೆ ಆರು ತಿಂಗಳಲ್ಲಿ 73.32 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. 7.21 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. 3 ಲಕ್ಷ ಕೋಟಿ ರೂ. ಅಧಿಕ ಅನುದಾನ ಬಜೆಟ್‌ನಲ್ಲಿ 80 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರಿಗೆ ಶೇ.1 ರಷ್ಟು ಅನುದಾನ ನೀಡಿಲ್ಲ” ಎಂದು ಆರೋಪಿಸಿದರು.
“ಸರ್ಕಾರ ಅಲ್ಪಸಂಖ್ಯಾತರಿಗೆ ಅನುದಾನ ಘೋಷಣೆ ಮಾಡಿ ನೀಡುತ್ತಿಲ್ಲ. ಆದರೂ ಪ್ರತಿಪಕ್ಷಗಳು ಅಲ್ಪಸಂಖ್ಯಾತರ ತುಷ್ಟೀಕರಣ ಎಂದು ಟೀಕಿಸುತ್ತಿರುವುದು ವಿಪರ್ಯಾಸ. ಸರ್ಕಾರಗಳ ನಡೆಯಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರು ತಬ್ಬಲಿಗಳಾಗುವಂತಾಗಿದೆ. ಸಂವಿಧಾನ ಬದ್ಧ ಆಶಯಗಳಿಗೆ ವಿರುದ್ದವಾಗಿ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಸಾಮಾಜಿಕ ನ್ಯಾಯ, ಎಲ್ಲರಿಗೂ ಸಮಬಾಳು ಸಮಪಾಲು ಎಂದು ಹೇಳುವ ಕಾಂಗ್ರೆಸ್ ಪಕ್ಷವೂ ಸಹ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಕೋಮುವಾದ ವಿರುದ್ದ ರಾಜ್ಯದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ದಲಿತರಿಗಿಂತ ಕನಿಷ್ಠ ಬದುಕು ಸವೆಸುತ್ತಿರುವ ಅಲ್ಪಸಂಖ್ಯಾತರ ಕುರಿತಂತೆ ರಾಜೇಂದ್ರ ಸಾಚಾರ, ರಂಗನಾಥ ಮಿಶ್ರಾ ಸಮಿತಿಗಳು ವರದಿ ನೀಡಿದ್ದರೂ ಸರ್ಕಾರಗಳು ಅನ್ಯಾಯ ಮಾಡುತ್ತಲೇ ಸಾಗಿವೆ. ₹25,000 ನೀಡುತ್ತಿದ್ದ ಫೆಲೋಶಿಪ್ ₹10,000ಕ್ಕೆ ಇಳಿಕೆಯಾಗಿದೆ. ಈಗ ಅದನ್ನೂ ನೀಡುತ್ತಿಲ್ಲ. ಅಲ್ಪಸಂಖ್ಯಾತರ ಸಮುದಾಯಗಳಿಗೆ ಅನುಕಂಪದ ಅಗತ್ಯವಿಲ್ಲ. ಸಂವಿಧಾನ ಬದ್ಧ ಪಾಲು ಒದಗಿಸಬೇಕಿದೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂಲಭೂತ ಸೌಕರ್ಯ ಕಲ್ಪಿಸಿ, ದೇವತಗಲ್ ಗ್ರಾಮಸ್ಥರ ಆಗ್ರಹ
“ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶಿಷ್ಯವೇತನವನ್ನು ರದ್ದುಪಡಿಸಿದೆ. ರಾಜ್ಯ ಸರ್ಕಾರದಿಂದಲೇ ಶಿಷ್ಯವೇತನ ಪಾವತಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ಇದೀಗ ನಿರ್ಲಕ್ಷಿಸುತ್ತಿದೆ. ಈ ಕುರಿತು ರಾಜ್ಯ ಮುಖ್ಯಮಂತ್ರಿ ಸಿದ್ದಾರಾಮಯ್ಯ ಸೇರಿದಂತೆ ಅಲ್ಪಸಂಖ್ಯಾತರ ಸಚಿವ ಜಮೀರ ಅಹ್ಮದ್ ಅವರಿಗೆ ಹಲವು ಬಾರಿ ಮನವಿ ಮಾಡಲಾಗಿದೆಯಾದರೂ ಕೇವಲ ಭರವಸೆ ದೊರೆಯುತ್ತಿದೆಯೇ ಹೊರತು ಶಿಷ್ಯವೇತನ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರ ಕೇವಲ ಭರವಸೆ ನೀಡದೆ ಶಿಷ್ಯವೇತನ ಬಿಡುಗಡೆಗೊಳಿಸಿ ಶೈಕ್ಷಣಿಕವಾಗಿ ಮಕ್ಕಳಿಗೆ ನೆರವಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಮುಸ್ತಫಾ, ಅನಾನ್, ಯಸೂಫ್ ಇದ್ದರು.
ವರದಿ : ಹಫೀಜುಲ್ಲ