ವಸತಿನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ವೇತನ ಸಮಸ್ಯೆ ನಿವಾರಣೆ ಮತ್ತು ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಅಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ರಾಯಚೂರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರು ಮಾತನಾಡಿ, “ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಡಿ ಗ್ರೂಪ್ ಹುದ್ದೆಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ವೇತನ ಬಾಕಿ ಸಮಸ್ಯೆ ಬಗೆಹರಿಯದಿರುವ ಹಾಗೂ ಇತರ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಲು ಕೆಲ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದು, ಜನವರಿ ಅಂತ್ಯದೊಳಗೆ ವೇತನ ಬಾಕಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಮತ್ತು ಇತರ ಶಾಸನಬದ್ಧ ಸೌಲಭ್ಯಗಳನ್ನು ಖಾತ್ರಿಪಡಿಸುವ ಬಗ್ಗೆಯೂ ನಡಾವಳಿ ಮಾಡಲಾಗಿತ್ತು. ಆದರೆ ಈವರೆಗೂ ವೇತನ ಬಾಕಿ ಹಾಗೆಯೇ ಇದೆ” ಎಂದರು.
“ಸಮಾಜ ಕಲ್ಯಾಣ ಇಲಾಖೆಯಡಿ ಮಾನ್ವಿ ತಾಲೂಕಿನ ಮೆಟ್ರಿಕ್ ಪೂರ್ವ ಹಾಸ್ಟೆಲ್ ಕಾರ್ಮಿಕರಿಗೆ 5 ತಿಂಗಳು, ಮೆಟ್ರಿಕ್ ನಂತರದ ಹಾಸ್ಟೆಲ್ ಕಾರ್ಮಿಕರಿಗೆ 6 ತಿಂಗಳು ಬಾಕಿಯಿದೆ. ಲಿಂಗಸಗೂರಿನಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೆಲ್ ಕಾರ್ಮಿಕರಿಗೆ 7 ತಿಂಗಳು, ಬಿಸಿಎಂ ಹಾಸ್ಟೆಲ್ ಕಾರ್ಮಿಕರಿಗೆ 3 ತಿಂಗಳು ಇನ್ನು ಲಿಂಗಸಗೂರು, ಮಾನ್ವಿ, ರಾಯಚೂರುಗಳ ಎಸ್‌ಟಿ ಹಾಸ್ಟೆಲ್ ಕಾರ್ಮಿಕರಿಗೆ 3ರಿಂದ 4 ತಿಂಗಳ ವೇತನ ಬಾಕಿಯಿದೆ. ಅಲ್ಲದೆ ಪರಿಷ್ಕೃತ ವೇತನದ ಅರಿಯರ್ಸ್ ಪಾವತಿಸಿಲ್ಲ. ಶಾಸನಬದ್ಧ ಸೌಲಭ್ಯಗಳಾದ ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು, ವಾರದ ರಜೆ, ಸಾರ್ವತ್ರಿಕ ರಜೆ ಹಾಗೂ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ದ್ವಿಗುಣ ವೇತನ ಮತ್ತು ವೇತನ ಚೀಟಿ, ಸಮವಸ್ತ್ರ ಮುಂತಾದ ಸೌಲಭ್ಯಗಳನ್ನು ನೀಡುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಖಾಸಗಿ ಬಸ್ ಮಾಲೀಕರು ಮತ್ತು ಏಜೆಂಟರ ನಡುವೆ ಗಲಾಟೆ; ಪ್ರಯಾಣಿಕರು ಹೈರಾಣ
“ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಫೆಬ್ರವರಿ 15ರ ಒಳಗೆ ಸಮಸ್ಯೆಗಳು ಇತ್ಯರ್ಥವಾಗದಿದ್ದಲ್ಲಿ ಗುತ್ತಿಗೆ ಕಾರ್ಮಿಕರೆಲ್ಲರೂ ಒಗ್ಗೂಡಿ ಹೋರಾಟ ನಡೆಸಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಹೇಶ ಚೀಕಲಪರ್ವಿ, ಅಮರೇಶ, ಹುಸೇನಪ್ಪ, ಹನುಮಂತ, ಜೋಸೆಫ್, ಮಹೇಶ, ಗೋವಿಂದ ರಾಯ, ನಿತಿನ್ ಕುಮಾರ, ಶೋಭಾ, ಎಸ್ ಕುಮಾರ, ಗೌರಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ