ಕೆ.ಎಸ್ ಈಶ್ವರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ನಿರ್ಲಕ್ಷಿಸಿರುವುದು ಖಂಡನೀಯ. ಕೂಡಲೇ ಈಶ್ವರಪ್ಪನವರ ಪುತ್ರ ಕಾಂತೇಶಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡಬೇಕು ಎಂದು ರಾಯಚೂರು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆ ಬಸವಂತಪ್ಪ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಹತ್ತಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ಸಂಘಟನೆ, ರಾಜಕೀಯವಾಗಿ ಕಾರ್ಯನಿರ್ವಹಿಸುತ್ತಿರುವ ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ನೀಡದಂತೆ ತಡೆಯಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಟಿಕೆಟ್ ನೀಡಲು ಮುಂದಾಗಬೇಕು. ಎಲ್ಲರಿಗೂ ಸಮಪಾಲು ಎಂದು ಹೇಳುವ ಬಿಜೆಪಿ ನಾಯಕರು ಕುರುಬ ಸಮಾಜಕ್ಕೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕಿದೆ” ಎಂದು ಹೇಳಿದರು.
“8 ಮಂದಿ ಲಿಂಗಾಯತರಿಗೆ ನಾಲ್ಕು ಮಂದಿ ಒಕ್ಕಲಿಗ ಸಮೂದಾಯವರಿಗೆ ಟಿಕೆಟ್ ನೀಡಿರುವಾಗ ಕುರುಬ ಸಮಾಜದವರಿಗೂ ಸಮಾನ ಅವಕಾಶವನ್ನು ನೀಡಬೇಕು. ಇಲ್ಲ ಕುರುಬ ಸಮಾಜದ ವೋಟು ಬೇಡವೆಂದು ಹೇಳಲಿ” ಎಂದು ಆಗ್ರಹಿಸಿದರು.
“ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ದೊರೆಯದೇ ಹೋದಲ್ಲಿ ಸಮಾಜದ ಬೆಂಬಲ ಸಿಗುವುದು ಕಷ್ಟ. ಜಿಲ್ಲೆಯೊಂದರಲ್ಲಿಯೇ 3 ಲಕ್ಷ ಸಮಾಜದ ವೋಟುಗಳಿವೆ. ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲು ಸಮಾಜದ ಜನರು ಯೋಚಿಸಬೇಕಾಗುತ್ತದೆ. ಶೀಘ್ರ ಬಿಜೆಪಿ ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗೆಜೆಟೆಡ್ ಪ್ರೋಬೇಷನರಿ ಹುದ್ದೆ ನೇಮಕಾತಿಯಲ್ಲಿ ವಯಸ್ಸಿನ ವಿನಾಯ್ತಿ ನೀಡಲಿ: ರಝಾಕ್ ಉಸ್ತಾದ್
ಈ ಸಂದರ್ಭದಲ್ಲಿ ಬಿ ಬಸವರಾಜ, ನಾಗರಾಜ ಮಡ್ಡಿಪೇಟೆ, ಶಿವರಾಜ ಮರ್ಚಟ್ಹಾಳ, ಶೇಖರ ವಾರದ, ಬಡೆಪ್ಪ ಮಟಮಾರಿ ಇದ್ದರು.
ವರದಿ : ಹಫೀಜುಲ್ಲ