ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತಾಗಿ ಪರಿಶಿಷ್ಟ ಜಾತಿಗಳಿಗೆ ಶೇ.17ರಷ್ಟು ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲಾತಿ ನಿಗದಿಪಡಿಸಿ ಕೇಂದ್ರಕ್ಕೆ ಪರಿಷ್ಕೃತ ಶಿಫಾರಸು ರವಾನಿಸಬೇಕು ಎಂದು ಸಮಾಜಿಕ ನ್ಯಾಯಕ್ಕಾಗಿ ಎಸ್‌ಸಿ ಒಳಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್ ಮಾರೆಪ್ಪ ಆಗ್ರಹಿಸಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಮುಂಗಾರು ಅಧಿವೇಶನದಲ್ಲಿಯೇ 9ನೇ ಶೆಡ್ಯೂಲ್‌ಗೆ ಸೇರ್ಪಡೆ ಹಾಗೂ ಸಂವಿಧಾನ ಪರಿಚ್ಛೇದ 341(3)ಕ್ಕೆ ತಿದ್ದುಪಡಿ ತರಬೇಕು” ಎಂದು ಆಗ್ರಹಿಸಿದರು.
“ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲು ಹಿಂದಿನ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸು ಪರಿಷ್ಕರಣೆಗೆ ಒಳಪಡಿಸಲಾಗಿದೆ. ರಾಜ್ಯ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನಮಂಡಲದಲ್ಲಿಯೇ ಪರಿಷ್ಕೃತ ಶಿಫಾರಸು ಕೇಂದ್ರಕ್ಕೆ ರವಾನಿಸಲು ಮುಂದಾಗಬೇಕು” ಎಂದರು.
“ಬಿಜೆಪಿ ನಾಯಕರುಗಳಾದ ಬಿ ಎಲ್ ಸಂತೋಷ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಹುತೇಕ ನಾಯಕರು ಸಂಸತ್‌ನಲ್ಲಿ ಮಂಡಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ 9ನೇ ಶೆಡ್ಯೂಲ್‌ಗೆ ಸೇರ್ಪಡೆಗೆ ತೀರ್ಮಾನ ಮಾಡಬೇಕು” ಎಂದು ಆಗ್ರಹಿಸಿದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಸ್‌ಸಿ ಒಳಮೀಸಲಾತಿ ನೀಡಿದ್ದರಿಂದಲೇ ಪಕ್ಷಕ್ಕೆ ಸೋಲಾಯಿತೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು ತಪ್ಪು. ಸ್ವಯಂಕೃತ ಅಪರಾಧಗಳಿಂದಲೇ ಬಿಜೆಪಿಗೆ ಸೋಲಾಗಿದೆ” ಎಂದು ಹೇಳಿದರು.
“ಬಂಜಾರ ಸಮುದಾಯವದರು ಒಳಮೀಸಲು ವಿರೋಧಿಸಿದ್ದರಿಂದ ಬಿಜೆಪಿ ಸೋಲಾಗಿದೆಯೆಂದು ಹೇಳುತ್ತಿದ್ದಾರೆ. ಬಿಜೆಪಿಯಿಂದ ಬಂಜಾರ ಸಮುದಾಯದ ಐದು ಮಂದಿ ಶಾಸಕರು ಗೆಲವು ಸಾಧಿಸಿದ್ದಾರೆ. ಇದೇ ಬಂಜಾರ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದೆ ಎಂಬುದಕ್ಕೆ ನಿದರ್ಶನವಾಗಿದೆ” ಎಂದರು.
“ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಈಗಾಗಲೇ ಎಸ್‌ಸಿ/ಎಸ್‌ಟಿ ಸಮೂದಾಯಗಳಿಗೆಮೀಸಲಾತಿ ಹೆಚ್ಚಿಸಿ ಶಿಫಾರಸು ಮಾಡಿದೆ. ಕೆಲ ನ್ಯೂನತೆಗಳಿದ್ದು, ಸರಿಪಡಿಸಿ ಪರಿಷ್ಕೃತ ಶಿಫಾರಸಿಗೆ ಮುಂದಾಗಬೇಕು” ಎಂದು ಆಗ್ರಹಿಸಿದರು.
“ಈಗಾಗಲೇ ನಿಗದಿಪಡಿಸಲಾದ ಅನುಪಾತದಡಿ ಎಸ್‌ಇಪಿ, ಟಿಎಸ್‌ಪಿ ಅನುದಾನ ನಿಗದಿಗೊಳಿಸಿ ಆದೇಶಿಸಬೇಕು. ಮೋಚಿ, ಸಮಗಾರ, ಡೋಹರ್ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸುವುದು, ಎಸ್‌ಸಿಪಿ ಕಾಯಿದೆ ಕಲಂ 7ರಡಿ ರದ್ದುಗೊಳಿಸಿ ಬಂಜಾರ ಸಮುದಾಯ ದಾಖಲಿಸಿರುವ ಉಚ್ಛ ನ್ಯಾಯಾಲಯ ಪ್ರಕರಣವನ್ನು ರಾಜ್ಯ ಸರ್ಕಾರ ವಿರೋಧಿಸಬೇಕು” ಎಂದು ಒತ್ತಾಯಿಸಿದರು.
“ಸಂಸತ್ ಅಧಿವೇಶನ ಮುಂದಿನ ತಿಂಗಳ 11 ರಿಂದ 21 ವರೆಗೆ ಮುಂಗಾರ ಅಧಿವೇಶನ ಪ್ರಾರಂಭವಾಗಲಿದ್ದು, ಜುಲೈ ಅಂತ್ಯಕ್ಕೆ ರಾಜ್ಯದ ಎಲ್ಲ ಸಂಸದರ ಮನೆಗಳ ಮುಂದೆ ಧರಣಿ ನಡೆಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಆಗ್ರಹಿಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಸ್‌ಸಿ/ಎಸ್‌ಟಿ ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಛಲವಾದಿ ಮಹಾಸಭಾ ಅಧ್ಯಕ್ಷ ರವೀಂದ್ರನಾಥ ಪಟ್ಟಿ ಮಾತನಾಡಿ, “ಮಾಧಸ್ವಾಮಿ ನೇತೃತ್ವದ ಉಪ ಸಮಿತಿ ನೀಡಿರುವ ವರದಿಯಂತೆ ಹೊಲೆಯ, ಮಾಲಾ ಜಾತಿಗಳನ್ನು ಅಲೆಮಾರಿ ಪಟ್ಟಿಗೆ ಸೇರ್ಪಡೆ ಮಾಡಿರುವದನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಛಲವಾದಿ ಸಮುದಾಯದ ಉಪಜಾತಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಬದಲ್ಲಿ ರಾಜ್ಯ ಸಂಚಾಲಕ ಜೆ ಬಿ ರಾಜು, ಹೇಮರಾಜ ಅಸ್ಕಿಹಾಳ, ರಾಘವೇಂದ್ರ ಬೋರೆಡ್ಡಿ, ಜಂಬಣ್ಣ, ನರಸಪ್ಪ, ಎಂ ಈರಣ್ಣ, ಹನುಮಂತಪ್ಪ ಮನ್ನಾಪುರು, ಆಂಜಿನೇಯ ಉಟ್ಕೂರು ಸೇರಿದಂತೆ ಇತರರು ಇದ್ದರು.