ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ದಂಡ ಹಾಕುವುದನ್ನು ಎರಡು ತಿಂಗಳು ಸ್ಥಗಿತಗೊಳಿಸಿ ರಸ್ತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ರಾಜೇಶ ಕುಮಾರ ಮನವಿ ಮಾಡಿದರು.
ರಾಜ್ಯ ಸರ್ಕಾರ ಈ ಹಿಂದೆ ಹೆಲ್ಮೆಟ್ ಕಡ್ಡಾಯ ಆದೇಶ ಮಾಡಿದರೂ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಮಾಡಿಲ್ಲ. ಆದರೆ ನವೆಂಬರ್ 1ರಿಂದ ರಾಯಚೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಏಕಾಏಕಿ ದಂಡ ವಸೂಲಿ ಮಾಡುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ಗುಣಮಟ್ಟದ ರಸ್ತೆಯಿಲ್ಲ, ಸಿಗ್ನಲ್, ಸಿಸಿ ಕ್ಯಾಮೆರಾ, ಸ್ಪೀಡ್ ಬ್ರೇಕರ್ಸ್ ಅಳವಡಿಸಿಲ್ಲ. ಇದನ್ನು ಮೊದಲು ಅಳವಡಿಸಿ ರಸ್ತೆ ಸುರಕ್ಷತೆ ಕೈಗೊಳ್ಳಬೇಕು. ಬಳಿಕ ಹೆಲ್ಮೆಟ್ ಧರಿಸದವರಿಗೆ ದಂಡ ಹಾಕಲಿ ಎಂದು ಸೋಮವಾರ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಒತ್ತಾಯಿಸಿದರು.
ಹೆಲ್ಮೆಟ್ ಧರಿಸದ ದ್ರಿಚಕ್ರ ವಾಹನ ಸವಾರರಿಗೆ ₹500 ರಿಂದ ₹1000 ದಂಡ ಹಾಕುವುದರಿಂದ ರಸ್ತೆ ಬದಿಯಲ್ಲಿ ಅನೇಕ ವ್ಯಾಪಾರಸ್ಥರು ಕಂಡಕಂಡಲ್ಲಿ ಕಳಪೆ ಹೆಲ್ಮೆಟ್ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸವಾರರ ಸುರಕ್ಷತೆಗೆ ಖಾತ್ರಿ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯಿಂದ ಇದನ್ನು ಪರಿಶೀಲಿಸಿ ಕಳಪೆ ಹೆಲ್ಮೆಟ್ ವಶಕ್ಕೆ ಪಡೆದು ಕ್ರಮ ಕೈಗೊಳ್ಳಬೇಕು. ವಾಹನಗಳ ಬಿಡಿ ಭಾಗ ಮಾರಾಟ ಮಾಡುವವರಿಗೆ ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಆಳಂದ | ಈ ದಿನ ಫಲಶೃತಿ: ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣಕ್ಕೆ ₹1.80 ಕೋಟಿ ಅನುದಾನ ಬಿಡುಗಡೆ
2 ದಿನಗಳ ಒಳಗೆ ರಸ್ತೆ ಸುರಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಶೀಲನೆ ಮಾಡಿ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಿದ್ಯಾರ್ಥಿಗಳ ಜೊತೆಗೂಡಿ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜು, ಅಗಸ್ಟೀನ್, ಆಂಜನೇಯ ಮತ್ತಿತರರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
