ಆಶಾ ಕಾರ್ಯಕರ್ತರಿಗೆ ಮಾಸಿಕ ನಿಶ್ಚಿತ ಪ್ರೋತ್ಸಾಹ ಧನ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಯುಟಿಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
“ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಪ್ರಣಾಳಿಕೆಯ ಭರವಸೆ, ಮಾಸಿಕ ₹15,000 ನಿಶ್ಚಿತ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
“ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ₹2000 ಗೌರವಧನವನ್ನು ಹೆಚ್ಚಿಗೆ ಮಾಡಬೇಕು. ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು. ಮೊಬೈಲ್ ಡೇಟಾ ಒದಗಿಕೊಡಲು ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಬೇಕು. ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
“60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಹಿಡಿಗಂಟಿನ ಮೊತ್ತವನ್ನು ₹3 ಲಕ್ಷಕ್ಕೆ ಹೆಚ್ಚಿಸಬೇಕು. ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು. ಆಶಾ ಸೇವೆಯಲ್ಲಿ ಇದ್ದಾಗ ಆಗುವ ಅನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಅಸ್ಪೃಶ್ಯತೆ, ಅಸಮಾನತೆ ಜೀವಂತವಾಗಿರಿಸಿರುವುದೇ ಆರ್‌ಎಸ್‌ಎಸ್ ಸಾಧನೆ: ಯೋಗೇಶ್ ಜಪ್ಪಿನಮೊಗರು
ಪ್ರತಿ ವರ್ಷ ಪ್ರತಿ ಆಶಾ ಕಾರ್ಯಕರ್ತೆಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ನೀಡಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್-ಇಎಸ್‌ಐ ಸೌಲಭ್ಯ ನೀಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಈರಮ್ಮ, ಕಾರ್ಯದರ್ಶಿ ರಾಧ, ಮಹೇಶ ಸಿ, ಶರಣಪ್ಪ ಉದ್ಬಾಳ, ಅಣ್ಣಪ್ಪ, ವೀರೇಶ್ ಎನ್ ಎಸ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಇದ್ದರು.
