ರಾಯಚೂರಿನ ಲಿಂಗಸೂಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಶೌಚಾಲಯ ಕಳೆದ ಎರಡು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ. ನಿರ್ವಹಣೆಯ ಕೊರತೆಯಿಂದ ಬಳಕೆಗೆ ಅಸಾಧ್ಯವಾಗಿದೆ. ಸುತ್ತಲೂ ಮುಳ್ಳಿನ ಕಂಟಿಗಳು ಬೆಳೆದು ನಿಂತಿದ್ದು, ಶೌಚಾಲಯದ ಒಳಗೆ ಪ್ರವೇಶಿಸುವುದೇ ಒಂದು ಸವಾಲಾಗಿದೆ.
ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಶೌಚಾಲಯ ಇದ್ದರೂ ಮಹಿಳೆಯರು ದಾರಿಯಲ್ಲೇ ಶೌಚಕ್ಕೆ ಹೋಗುವಂತಾಗಿದ್ದು, ಇದು ಗೌರವಪೂರ್ಣ ಬದುಕಿಗೆ ತೊಂದರೆಯಾಗಿದೆ. ʼಕಾಲಿಡಲು ಸಹ ಭಯವಾಗುತ್ತಿದೆʼ ಎಂದು ಗ್ರಾಮದ ಮಹಿಳೆಯರು ಆರೋಪಿಸುವುದರ ಜತೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಶೌಚಾಲಯವನ್ನು ರಾಯಚೂರು ಜಿಲ್ಲಾ ಮಿನರಲ್ ಫೌಂಡೇಶನ್ ಯೋಜನೆಯಡಿಯಲ್ಲಿ 2021-22ನೇ ಸಾಲಿನಲ್ಲಿ ಸುಮಾರು 28.82 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಶೌಚಾಲಯದಲ್ಲಿ ಬೋರ್‌ವೆಲ್, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳು ಸಮರ್ಪಕವಾಗಿದ್ದರೂ ಬಳಕೆಯಿಲ್ಲದೇ ಅವೂ ಹಾಳಾಗಲು ಮೊದಲಾಗಿವೆ. ಇಡೀ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಸರ್ಕಾರದ ವಿವಿಧ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಮುದಾಯ ಶೌಚಾಲಯ, ಸಾಮೂಹಿಕ ಮಹಿಳಾ ಶೌಚಾಲಯ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಕೊರತೆಯಿಂದ ಹಲವು ವರ್ಷಗಳಿಂದ ಅವು ಸ್ಥಗಿತಗೊಂಡಿವೆ. ಇದರಿಂದ ಇಲ್ಲಿನ ಮಹಿಳೆಯರು ಅನಿವಾರ್ಯವಾಗಿ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ ಗೌರಮ್ಮ ಈದಿನ ಡಾಟ್ ಕಾಮ್ ಜತೆ ಮಾತನಾಡಿ, “ಅನೇಕ ವರ್ಷಗಳಿಂದ ಶೌಚಾಲಯಗಳು ಸ್ಥಗಿತಗೊಂಡ ಕಾರಣ ಮಹಿಳೆಯರು ಊರ ಹೊರ ವಲಯದಲ್ಲಿನ ಹೊಲದ ದಾರಿ, ರಸ್ತೆ ಬದಿ ಶೌಚಕ್ಕೆ ಕೂಡಬೇಕು. ಇಲ್ಲವಾದರೆ ಮುಳ್ಳುಕಂಟಿ, ತಗ್ಗು ಗುಂಡಿಗಳನ್ನು ಆಶ್ರಯಿಸಬೇಕಾಗಿದೆ. ಸೂರ್ಯೋದಯದ ಒಳಗೆ ಅಥವಾ ಸೂರ್ಯಾಸ್ತದ ನಂತರ ಶೌಚ ಮುಗಿಸಬೇಕಾಗಿದೆ. ಸಮಸ್ಯೆ ಇಷ್ಟು ಬಿಗಡಾಯಿಸಿದ್ದರೂ ಮಹಿಳೆಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಥಳೀಯ ರೈತ ಮುಖಂಡ ಮಲ್ಲಯ್ಯ ಕೋಳೂರ ಮಾತನಾಡಿ, “ಹಲವು ಬಾರಿ ಶೌಚಾಲಯದ ಅಸ್ತವ್ಯಸ್ತದ ಕುರಿತು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಾಮಗಾರಿ ಮುಗಿದು ಎರಡು ವರ್ಷಗಳಾಗುತ್ತಿದ್ದರೂ ಗುತ್ತಿಗೆದಾರರು ಪಂಚಾಯತ್‌ಗೆ ಶೌಚಾಲಯ ಹಸ್ತಾಂತರಿಸಿಲ್ಲ. ಇನ್ನು ನಮ್ಮ ವ್ಯಾಪ್ತಿಗೆ ಬಂದಾಗ ನಾವು ಸರಿ ನಿರ್ವಹಣೆ ಮಾಡಬಹುದು ಎಂದು ಪಂಚಾಯತಿ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಹಾಗಿದ್ದರೆ ಇಲ್ಲಿ ಶೌಚಾಲಯ ನಿರ್ಮಿಸಿದ್ದು ನಾಮಕಾವಸ್ತೆಗೆ ಅಲ್ಲವೇ.. ಬಳಕೆಗೆ ಕೊಡದೆ ಪಾಳು ಬೀಳಿಸುವುದಾದರೆ ಲಕ್ಷಾಂತರ ಅನುದಾನ ಖರ್ಚು ಮಾಡಿ ಕಟ್ಟಿದ್ದಾದರೂ ಯಾಕೆ” ಎಂದು ವ್ಯವಸ್ಥೆಯನ್ನು ಪ್ರಶ್ನಿಸಿದರು.
“ಶೌಚಾಲಯವಿಲ್ಲದೆ ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವಾಸ್ತವದಲ್ಲಿ ಹೊರ ವಲಯದ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ಗ್ರಾಮಸ್ಥರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಜನ ಮೂಗು ಮುಚ್ಚಿಕೊಂಡು ಹೋಗದೇ ಬೇರೆ ದಾರಿಯಿಲ್ಲ. ಇಲ್ಲಿನ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಮ ರೋಗರುಜಿನುಗಳಿಗೆ ಆವಾಸಸ್ಥಾನವಾಗಿದೆ. ಮಾರಣಾಂತಿಕ ಸೋಂಕುಗಳ ಭಯ ಜನರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಯಚೂರು | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಈ ಕುರಿತು ಗೌಡೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಇಸಾಕ್ ಮಾತನಾಡಿ, “ಈಗಾಗಲೇ ಆಸಕ್ತ ಸ್ವಚ್ಛತಾ ಕಾರ್ಮಿಕರಿಂದ ಅರ್ಜಿ ಕರೆಯಲಾಗಿದೆ. ಆದರೆ ಇದುವರೆಗೆ ಯಾವುದೇ ಅರ್ಜಿಗಳು ಸ್ವೀಕೃತವಾಗಿರುವುದಿಲ್ಲ. ಹಾಗಾಗಿ ಶೌಚಾಲಯದ ಸ್ವಚ್ಛತಾ ಕಾರ್ಯ ವಿಳಂಬವಾಗಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಅರ್ಜಿದಾರರು ಸಿಕ್ಕ ಕೂಡಲೇ ಶೌಚಾಲಯವನ್ನು ಸ್ವಚ್ಛಗೊಳಿಸಿ ಗ್ರಾಮದ ಮಹಿಳೆಯರ ಬಳಕೆಗೆ ನೀಡಲಾಗುವುದು” ಎಂದು ತಿಳಿಸಿದರು.
“ಕೇಂದ್ರ ಸರ್ಕಾರದ ʼಬಯಲು ಮುಕ್ತ ಶೌಚಾಲಯ, ʼಮನೆ ಮನೆಗೆ ಶೌಚಾಲಯʼ, ʼಸ್ವಚ್ಛ ಭಾರತʼ ಎನ್ನುವ ಹಲವು ಯೋಜನೆಗಳು ವೇದಿಕೆ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ ಎನ್ನುವಂತಾಗಿದೆ. ಶೌಚಾಲಯ ಸ್ವಚ್ಛವಾಗಿದ್ದರೆ ಇಡೀ ಗ್ರಾಮವೇ ಸ್ವಚ್ಛವಾಗಿ ಆರೋಗ್ಯವಾಗಿರುತ್ತದೆ. ಇನ್ನು ಮುಂದಾದರೂ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ಗ್ರಾಮದ ಮಹಿಳೆಯರ ಬಳಕೆಗೆ ಶೌಚಾಲಯ ನೀಡಬೇಕು, ಮುಂದಿನ ದಿನಗಳಲ್ಲಿ ಸಮಗ್ರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದರು.
