ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ, ಮೆರವಣಿಗೆ ವೇಳೆ ಡಿಜೆಯಿಂದ ಹೊರಹೊಮ್ಮುವ ಶಬ್ದದಿಂದ ಸಾಕಷ್ಟು ಜನರಿಗೆ ಹೃದಯಾಘಾತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಡಿಜೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡಿಜೆ ಅಳವಡಿಸಿದರೆ ಗಣೇಶ ಪ್ರತಿಷ್ಠಾಪನೆ ಸಮಿತಿ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿವೈಎಸ್‌ಪಿ ಎಂ ಜಿ ಸತ್ಯ ನಾರಾಯಣ ರಾವ್ ಹೇಳಿದರು.
ರಾಯಚೂರು ನಗರದ ಸದರ್ ಬಜಾರ್ ಪೋಲಿಸ್ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ತ ಶಾಂತಿ ಪಾಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಡಿಜೆ ಮಕ್ಕಳು, ವೃದ್ಧರು ಸೇರಿದಂತೆ ಜನಸಾಮಾನ್ಯರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಆದೇಶ ಮಾಡಿದೆ. ಸಂಪೂರ್ಣವಾಗಿ ಡಿಜೆ ನಿಷೇಧಿಸಲಾಗಿದೆ. ಈಗಾಗಲೇ ಡಿಜೆ ಬುಕ್ಕಿಂಗ್ ಮಾಡಿರುವವರು ಹಿಂಪಡೆಯಬೇಕು. ಒಂದು ವೇಳೆ ಡಿಜೆ ಅಳವಡಿಸಿದರೆ ಪ್ರಕರಣ ದಾಖಲಿಸಲಾಗುತ್ತದೆ. ಡಿಜೆ ಅಳವಡಿಕೆಗೆ ಜನಪ್ರತಿನಿಧಿಗಳಿಂದ ಅನುಮತಿ ತಂದರೂ ಪರವಾನಗಿಗೆ ಅವಕಾಶ ನೀಡುವುದಿಲ್ಲ” ಎಂದರು.
“ಗಣೇಶ ವಿಸರ್ಜನೆಯ ಮೆರವಣಿಗೆ ಶಾಂತಿಯಿಂದ ನಡೆಯಬೇಕು. ಭಕ್ತಿ ಭಾವದಿಂದ ಮೆರವಣಿಗೆ ನಡೆಸಬೇಕು. ಗಣೇಶ ಪ್ರತಿಷ್ಠಾಪನೆಗೆ ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ಗಣೇಶ ಪ್ರತಿಷ್ಠಾಪನೆ ಮಾಡಲು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ನಗರಸಭೆ ಮತ್ತು ಗ್ರಾಮೀಣ ಭಾಗದಲ್ಲಿ ಪಂಚಾಯತಿಯಿಂದ ಪರವಾನಗಿ ಪಡೆಯಬೇಕು. ರಸ್ತೆ ಮಧ್ಯೆ, ರಸ್ತೆ ಬದಿಯಲ್ಲಿ ಪ್ರತಿಷ್ಠಾಪನೆ ಮಾಡಿದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು” ಎಂದರು.
“ಖಾಸಗಿ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ಸ್ಥಳದ ಮಾಲೀಕರಿಂದ ಪರವಾನಗಿ ಪಡೆಯಬೇಕು. ಪ್ರತಿಷ್ಠಾಪನೆ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕೆ ನಿಗದಿತ ಶುಲ್ಕವಿರುತ್ತದೆ, ಅದನ್ನು ಭರಿಸಿ ಪರವಾನಗಿ ತೆಗೆದುಕೊಳ್ಳಬೇಕು” ಎಂದು ತಿಳಿಸಿದರು.
ಪ್ರತಿಷ್ಠಾಪನೆ ಮಾಡಿದ ಗಣೇಶ ವೀಕ್ಷಣೆಗೆ ಮಹಿಳೆಯರು ಸಾರ್ವಜನಿಕರು ಆಗಮಿಸುತ್ತಾರೆ. ಗ್ಯಾಲರಿ ವ್ಯವಸ್ಥೆ ಮಾಡಿಕೊಳ್ಳಿ. ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಸೂಕ್ತವಾಗಿದ್ದು, ಅಹಿತಕರ ಘಟನೆ ನಡೆಯದಂತೆ ಸಹಕಾರಿಯಾಗುತ್ತದೆ. ಈ ಎಲ್ಲಾ ಪರವಾನಗಿ ಇದ್ದಲ್ಲಿ ಮೈಕ್ ಪರವಾನಗಿ ನೀಡಲಾಗುತ್ತದೆ. ಕೇವಲ ಎರಡು ಸ್ಫೀಕರ್ ಅಳವಡಿಸಿ, ಡಿಜೆಗೆ ಅನುಮತಿ ಇಲ್ಲ, ಸುಪ್ರೀಂ ಕೋರ್ಟ್ ಈ ಬಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ” ಎಂದು ತಿಳಿಸಿದರು.
“ಗಣೇಶನ ಸಮಿತಿಗಳು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಹೆಚ್ಚಿನ ಒತ್ತು ನೀಡಿ, ಪಿಒಪಿ ಗಣೇಶ ನಿಷೇಧಿಸಿ ಪರಿಸರ ಮಾಲಿನ್ಯ ತಡೆಯಿರಿ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಕಾಲ್ನಡಿಗೆ ಜಾಥಾ
ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪಿಎಸ್‌ಐ ಮಂಜುನಾಥ, ಸಂಚಾರಿ ಠಾಣೆ ಪಿಎಸ್‌ಐ ವೆಂಕಟೇಶ, ಯರಗೇರಾ ಪಿಎಸ್‌ಐ, ಮಾರ್ಕೆಟ್ ಯಾರ್ಡ್ ಪಿಎಸ್‌ಐ ಸೇರಿದಂತೆ ಗಣೇಶ ಸಮಿತಿಯ ಮುಖಂಡರು ಇದ್ದರು.