ಬಳ್ಳಾರಿ ನಗರಕ್ಕೆ ಒಬ್ಬರು ಚುನಾಯಿತ ಶಾಸಕರಿದ್ದರೆ, ಇನ್ನೂ ನಾಲ್ವರು ಅಘೋಷಿತ ಶಾಸಕರಿದ್ದಾರೆ. ಈ ಐವರಿಂದ ಅಧಿಕಾರಿಗಳು ಸರಿಯಾಘಿ ಕೆಲಸ ಮಾಡಲು ಸಾಧ್ಯವಾಗಲುತ್ತಿಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಮುಖಂಡ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಆರೋಪಿಸಿದ್ದಾರೆ.
ಬಳ್ಳಾರಿಯ ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. “ಬಳ್ಳಾರಿ ಪಟ್ಟಣಕ್ಕೆ ಚುನಾಯಿತ ಶಾಸಕ ಭರತ್ ರೆಡ್ಡಿ ಹಾಗೂ ಅವರ ಕುಟುಂಬಸ್ಥರಾದ ಸೂರ್ಯ ನಾರಾಯಣ ರೆಡ್ಡಿ, ಪ್ರತಾಪ್ ರೆಡ್ಡಿ, ಶರತ್ ರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡ ಚಾನಳ್ ಶೇಖರ್ – ಐವರು ಶಾಸಕರಿದ್ದಾರೆ. ಇದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳೇ ಅಳಲು ತೋಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಶಾಸಕ ಭರತ್ ರೆಡ್ಡಿ ಜೊತೆ ಗ್ರಾನೈಟ್ ಬಿಜಿನೆಸ್ ಮಾಡುತ್ತಿದ್ದ ದೇವರೆಡ್ಡಿ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ದೇವರೆಡ್ಡಿ ಕುಟುಂಬಸ್ಥರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭರತ್ ರೆಡ್ಡಿ ಶಾಸಕರಾದ ಒಂದು ತಿಂಗಳ ನಂತರ ಬಿ ರಿಪೋರ್ಟ್ ಹಾಕಲಾಗಿದೆ. ನಗರ ಠಾಣೆಯ ಸಿಪಿಐ ಅವರು ವರ್ಗಾವಣೆಯಾಗಿದ್ದರೂ, ಅವರ ವರ್ಗಾವಣೆಯನ್ನು ತಡೆದು ಅದೇ ಠಾಣೆಯಲ್ಲಿ ಮುಂದುವರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಕೆಆರ್‌ಪಿಪಿ ಮುಖಂಡ ಆಲಿಖಾನ್ ಮಾತನಾಡಿ, “ಶಾಸಕ ಭರತ್ ರೆಡ್ಡಿಗೆ ಗಾಂಜಾ ಗಿರಾಕಿ ಎಂದು ನಾಮಕರಣ ಮಾಡುತ್ತಿದ್ದೇವೆ. ಅವರನ್ನು ನಾವು ಗಾಂಜಾ ಶಾಸಕ ಎಂದೇ ಕರೆಯುತ್ತೇವೆ. ದಿನದ 24 ಗಂಟೆಯೂ ಅವರು ಗಾಂಜಾ ಸೇವನೆ ಮಾಡಿದವರ ರೀತಿಯಲ್ಲಿ ಇರುತ್ತಾರೆ” ಎಂದರು.
ಈ ಸಂದರ್ಭದಲ್ಲಿ ದುರಪ್ಪ ನಾಯಕ, ಸಂಜಯ್ ಬೆಟಗೇರಿ, ಶಿವಾರೆಡ್ಡಿ, ಉಮಾರಾಜ್, ಪರ್ವಿನ್ ಭಾನು, ಮಲ್ಲಿಕಾರ್ಜುನ ಆಚಾರಿ, ಕೊಳಗಲ್ಲು ಅಂಜಿ ಸೇರಿದಂತೆ ಮತ್ತಿತರು ಇದ್ದರು.