ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಗುರುಗುಂಟ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಮನೆ ಮನೆಗೆ ತೆರಳಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಸಹಿ ಸಂಗ್ರಹ ಮಾಡುವ ಮೂಲಕ ಜಾಗೃತಿ ಮೂಡಿಸಿದರು.
ಕೇಂದ್ರ ಸರ್ಕಾರವು ಭಾರತದಾದ್ಯಂತ ವಿಶಾಲವಾದ ವಕ್ಫ್ ಆಸ್ತಿಗಳ ಮೇಲೆ ಮುಸ್ಲಿಮರ ನಿಯಂತ್ರಣವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಹೊಸ ತಿದ್ದುಪಡಿಗಳು ಸಮುದಾಯದ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ. ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕಿ ರದ್ದುಪಡಿಸಬೇಕು ಎಂದು ಜನರಿಗೆ ತಿಳಿಸಿದರು.
ತಿದ್ದುಪಡಿ ಮಾಡುವ ಪ್ರಸ್ತುತ ಕ್ರಮವು ಸಂವಿಧಾನ ವಿರೋಧಿ ಮತ್ತು ನಿರಂಕುಶವಾಗಿದೆ. ಮೋದಿ ಸರ್ಕಾರವು ಮುಸ್ಲಿಂ ವಕ್ಫ್ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಕ್ರಮ ದುರುದ್ದೇಶಪೂರಿತ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಎಸ್ ಡಿ ಪಿ ಐ ಮುಖಂಡ ಮೀರ್ ಅಲಿ ಮಾತನಾಡಿ, “ವಕ್ಫ್ ಆಸ್ತಿಗಳು ಸಾರ್ವಜನಿಕ ಆಸ್ತಿಗಳಲ್ಲ. ಇದು ಮುಸಲ್ಮಾನ ಸಮುದಾಯದ ಗಣ್ಯ ವ್ಯಕ್ತಿಗಳು ದಾನವಾಗಿ ನೀಡಿದ್ದು, ವಕ್ಫ್ ಆಸ್ತಿಯಾಗಿದೆ. ಸಮುದಾಯದ ಜನರು ಆರ್ಥಿಕವಾಗಿ ಸದೃಢವಾಗಲಿ ಎಂಬ ಸದುದ್ದೇಶದಿಂದ ವಕ್ಫ್ ಆಸ್ತಿಯಾಗಿ ಮಾರ್ಪಾಡಾಗಿದೆ” ಎಂದರು.
ಇದನ್ನು ಓದಿದ್ದೀರಾ? ಬೆಂಗಳೂರು | ಹಗಲು-ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ನಿರತರಾದ ಬಿಬಿಎಂಪಿ ಅಧಿಕಾರಿಗಳು
ಸಂವಿಧಾನದ ಪರಿಚ್ಛೇದ 25 – 28 ರ ಅಡಿಯಲ್ಲಿ ಖಾತ್ರಿಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಬದಿಗಿಟ್ಟು ಅವರನ್ನು ಗುಲಾಮರನ್ನಾಗಿ ಮಾಡುವುದು ಉದ್ದೇಶಪೂರ್ವಕ ಯೋಜನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕೋಮುವಾದಿ ಅಜೆಂಡಾವನ್ನು ಎಸ್ ಡಿಪಿಐ ಪಕ್ಷ ಬಲವಾಗಿ ಪ್ರತಿಭಟಿಸುತ್ತದೆ. ಸರ್ಕಾರವು ಈ ಸಂವಿಧಾನ ವಿರೋಧಿ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
