ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ಮದ್ಯಪಾನ ಮಾಡಿರುವ ಅವರು ಶಾಲೆಯ ಬಾಗಿಲ ಮುಂದೆ ಮಲಗಿರುವ ಘಟನೆ ಮಸ್ಕಿ ತಾಲ್ಲೂಕು ಗೋನಾಳ ಗ್ರಾಮದ ಅಂಬಾದೇವಿ ನಗರದಲ್ಲಿ ನಡೆದಿದೆ.
ನಿಂಗಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಎಂದು ತಿಳಿದು ಬಂದಿದೆ. ಶಿಕ್ಷಕನು ಈ ಹಿಂದೆಯೂ ಅನೇಕ ಬಾರಿ ಮದ್ಯಪಾನ ಮಾಡಿ ಶಾಲೆಗೆ ಬರಲಾಗದೆ ನಿರ್ಲಕ್ಷ್ಯ ಪ್ರದರ್ಶಿಸಿದ್ದಾನೆ. ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತಿರುವ ಶಿಕ್ಷಕರಂತಹವರು ಶಾಲೆಯಲ್ಲಿ ಮುಂದುವರೆಯುವುದು ಅಪಾಯಕಾರಿಯೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಎದುರಲ್ಲಿಯೇ ನಡೆಯಿರುವ ಈ ಘಟನೆಯಿಂದ ಪೋಷಕರು ಮತ್ತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇವನು ಶಿಕ್ಷಕನಾದರೆ ನಮ್ಮ ಮಕ್ಕಳು ಏನು ಕಲಿಯಬೇಕು? ಎಂದು ಪೋಷಕರು ಕಿಡಿಕಾರಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮರ ಬಿದ್ದು ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ ಗಾಯ
ಈ ಬಗ್ಗೆ ಸ್ಥಳೀಯ ಧರ್ಮರಾಜ ಗೋನಾಳ ಮಾತನಾಡಿ,ಶಿಕ್ಷಕನ ವಿರುದ್ಧ ಹಲವು ಬಾರಿ ದೂರು ನೀಡಿದರೂ ಸಂಬಂಧಿತ ಮೇಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಲಂಚ ಸ್ವೀಕರಿಸಿ ಶಿಕ್ಷಕನ ಮೇಲಿನ ಕ್ರಮವನ್ನು ತಡೆಯುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಮ್ಮ ದೂರುಗಳಿಗೆ ಸ್ಪಂದನೆ ಇಲ್ಲ. ಕೇವಲ ಹಣಕ್ಕೆ ಶಿಕ್ಷಕನನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಂಪರ್ಕಿಸಿದಾಗ, ಜಿಲ್ಲಾ ಶಿಕ್ಷಣಾಧಿಕಾರಿಗಳು, “ಈ ಘಟನೆ ಇದುವರೆಗೆ ನಮ್ಮ ಗಮನಕ್ಕೆ ಬಂದಿಲ್ಲ. ಸೂಕ್ತ ದಾಖಲೆ ಬಂದೊಡನೆ ಪರಿಶೀಲನೆ ನಡೆಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

