ರಾಯಚೂರಿನ ಮಾನ್ವಿ ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬಾರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವತಿಯಿಂದ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡುವ ಕೇಂದ್ರಕ್ಕೆ ರಾಜು ಪಿರಂಗಿ ಚಾಲನೆ ನೀಡಿದರು.
ಮಾನ್ವಿ ನಗರ, ಹಿರೇಕೋಟ್ನೆಕಲ್, ನಕ್ಕುಂದಿ, ಬ್ಯಾಗವಾಟ, ಪೋತ್ನಾಳ್ ಸೇರಿ 5 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿರುವುದರಿಂದ ರೈತರು ಬೆಳೆದ ಜೋಳಕ್ಕೆ ಉತ್ತಮ ಬೆಲೆ ದೊರೆಯಲಿದೆ. ರೈತರು ತಮ್ಮ ಜಮೀನಿನ ಸೂಕ್ತ ದಾಖಲೆಗಳನ್ನು ನೀಡಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೈಬ್ರೀಡ್ ಜೋಳವನ್ನು ಪ್ರತಿ ಕ್ವಿಂಟಾಲ್‌ಗೆ 3,371 ರೂ ಹಾಗೂ ಮಾಲ್ದಂಡಿ ಜೋಳವನ್ನು 3,421 ರೂ ನಂತೆ ಪ್ರತಿ ರೈತರು ಎಕರೆಗೆ 20 ಕ್ವಿಂಟಲ್ ನಂತೆ ಗರಿಷ್ಟ 150 ಕ್ವಿಂಟಲ್ ಜೋಳವನ್ನು ಮಾರಾಟ ಮಾಡುವುದಕ್ಕೆ ಅನುಕೂಲ ಕಲ್ಪಿಸಲಾಗಿದ್ದು ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತ ಕೋರಿದರು.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರಾದ ಆಶೀತ್ ಅಲಿ ಮಾತನಾಡಿ, “ಜಿಲ್ಲೆಯಲ್ಲಿ 35 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಮಾನ್ವಿಯಲ್ಲಿನ ಟಿಎಪಿಸಿಎಂಎಸ್‌ನಲ್ಲಿ 1462 ರೈತರು ನೊಂದಾಯಿಸಿಕೊಂಡಿದ್ದಾರೆ. ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ 1 ಲಕ್ಷ 20 ಸಾವಿರ ಕ್ವಿಂಟಲ್ ವರೆಗೂ ರೈತರಿಂದ ಜೋಳವನ್ನು ಖರೀದಿಸುವ ಗುರಿ ಹೊಂದಲಾಗಿದೆ. ಬಳಿಕ ಖರೀದಿಸಿದ ಜೋಳವನ್ನು ಪುನಃ ಸಾರ್ವಜನಿಕ ವಿತರಣಾ ಪದ್ದತಿ ಮೂಲಕ ಮರಳಿ ಜನರಿಗೆ ಕೊಡುವುದರಿಂದ ಉತ್ತಮ ಗುಣಮಟ್ಟದ ಜೋಳವನ್ನು ಮಾತ್ರ ಖರೀದಿ ಕೇಂದ್ರಗಳಿಗೆ ತರಬೇಕು. ಖರೀದಿಸಲಾಗುವ ಜೋಳದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ಜಮಾ ಮಾಡಲಾಗುವುದು” ಎಂದು ತಿಳಿಸಿದರು.
ಇದನ್ನೂ ಓದಿ: ರಾಯಚೂರು | ಮಾ.16ರಂದು ರಾಜ್ಯಮಟ್ಟದ ಚಿತ್ರ ಸಂತೆ
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕ ಎಂ.ಆರ್.ಮನೋಹರ್, ಜೋಳ ಗುಣಮಟ್ಟ ಪರೀಕ್ಷಕ ಕೃಷಿ ಅಧಿಕಾರಿ ಅಮರೇಶ, ತಾ. ಆಹಾರ ನಿರೀಕ್ಷಕ ದೇವರಾಜ ಟಿಎಪಿಸಿಎಂಎಸ್ ವ್ಯವಸ್ಥಾಪಕ ಸಿದ್ದರಾಮೇಶ ಬೆಟ್ಟದೂರು, ಮುಖಂಡರಾದ ರಾಮಣ್ಣ ನಾಯಕ, ರೈತ ಎಂ.ರವೀಂದ್ರಗೌಡ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು, ರೈತರು ಇದ್ದರು.
