ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಜುಲೈ ತಿಂಗಳಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಸುಲ್ತಾನ್ ಉದ್ಯಾನದ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ದಲಿತ, ಅಲ್ಪಸಂಖ್ಯಾತರ, ಬಡವರ ಮಕ್ಕಳಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಸರ್ಕಾರ ವಿಷಯವಾರು ಶಿಕ್ಷಕರನ್ನು ನೇಮಿಸಬೇಕು. ಶಿಕ್ಷಣ ಗುಣಮಟ್ಟ ಸುಧಾರಣೆಗೆ ತಕ್ಷಣವೇ ಒಂದು ಕ್ರಿಯಾ ಯೋಜನೆ ರೂಪಿಸಿ 3 ತಿಂಗಳೊಳಗೆ ಅನುಷ್ಠಾನ ಗೊಳಿಸಬೇಕು. ಶಾಲೆಗಳಲ್ಲಿ ಕೊಠಡಿಗಳು, ಬೆಂಚು, ವಿದ್ಯುತ್, ಶೌಚಾಲಯ, ಕುಡಿಯುವ ನೀರು,ಗ್ರಂಥಾಲಯ ಹಾಗೂ ಮೂಲಸೌಕರ್ಯ ಒದಗಿಸಬೇಕು ಹಾಗೂ ಪ್ರತಿ ಶಾಲೆಗೊಬ್ಬರು ಪರಿಚಾರಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ ಗುಣಮಟ್ಟ ಶಿಕ್ಷಣ ಮಾತ್ರ ದಲಿತರ ಜೀವನ ಸುಧಾರಣೆ ಮಾಡಬಹುದು ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣದ ಸುಧಾರಣೆಗೆ ಕನಿಷ್ಠ ಗಮನ ನೀಡದೇ ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣಕ್ಕೆ ಉತ್ತೇಜಿಸುತ್ತಿದೆ. ಶೇಕಡಾ 80 ರಷ್ಟು ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿ ಜಿಲ್ಲೆಯಲ್ಲಿ ಡಿಡಿಪಿಐಗಳು ಶಾಲೆಯ ಸ್ಥಿತಿಗತಿಗಳ ಶ್ವೇತ ಪತ್ರ ಬಿಡುಗಡೆ ಮಾಡಬೇಕು. ಕೆಕೆಆರ್ ಡಿಬಿ ಮತ್ತು ಪ್ರಾದೇಶಿಕ ಶಿಕ್ಷಣ ಆಯುಕ್ತರು 2 ತಿಂಗಳ ಒಳಗೆ ವರದಿ ಸಲ್ಲಿಸಬೇಕು. ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರು, ಶಿಕ್ಷಣ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ತಜ್ಞರ ಒಳಗೊಂಡಂತೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಮೇಲ್ವಿಚಾರಣೆ ಮಾಡಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಹಿಳಾ ಶೌಚಾಲಯ ಜಾಗದಲ್ಲಿ ಅಕ್ರಮ ಶೆಡ್ ನಿರ್ಮಾಣ; ತೆರುವಿಗೆ ಖಾಲಿ ಚೊಂಬು ಹಿಡಿದು ಪ್ರತಿಭಟನೆ
ಪ್ರತಿಭಟನೆಯಲ್ಲಿ ಭೀಮಮ್ಮ, ಮರಿಯಮ್ಮ, ಸುನಿತಾ, ವಿದ್ಯಾ ಪಾಟೀಲ್, ವೀಣಾ, ಭಾಗ್ಯಲಕ್ಷ್ಮೀ, ಶ್ರೀದೇವಿ, ರೂಪಾ, ಸೀತಾ, ಜಿ.ಬಸವರಾಜ ಉಪಸ್ಥಿತರಿದ್ದರು.