ಹಿರಿಯ ದೇವದಾಸಿ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಧನವನ್ನು ₹1,500ರಿಂದ ₹5,000ಕ್ಕೆ ಹೆಚ್ಚಿಸಬೇಕು. ಬಾಕಿ ಇರುವ 4 ತಿಂಗಳ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
“ಕಳೆದ ಏಳು ವರ್ಷಗಳಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಒಂದೆಡೆಯಾದರೆ, ಬರಗಾಲ, ನೆರೆಹಾವಳಿ, ಕೋವಿಡ್ ಸೇರಿದಂತೆ ದೇವದಾಸಿ ವಿಮುಕ್ತ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ. ಕಳೆದ 7 ವರ್ಷಗಳಿಂದ ಪಿಂಚಣಿ ಹಣವನ್ನು ₹1500ರಿಂದ ₹3000ಕ್ಕೆ ಹೆಚ್ಚಿಸಲು ಒತ್ತಾಯಿಸುತ್ತಾ ಬಂದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರೈತರು ಸ್ವಾಭಿಮಾನದಿಂದ ಇರಬೇಕು: ರೈತ ಸಂಘದ ಸಿದ್ದವೀರಪ್ಪ
“ನೂತನ ಕಾಂಗ್ರೆಸ್ ಸರ್ಕಾರ ಹಿರಿಯ ದೇವದಾಸಿಯರಿಗೆ ನೀಡುವ ಮಾಸಿಕ ಪಿಂಚಣಿಯನ್ನು ₹5,000ಕ್ಕೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಪರಿತ್ಯಕ್ತ ಮಕ್ಕಳಿಗೂ ವಿಸ್ತರಿಸಬೇಕು. ದೇವದಾಸಿ ಮಹಿಳೆಯರ ಹಾಗೂ ಅವರ ಮಕ್ಕಳ ಕುಟುಂಬ ಸದಸ್ಯರನ್ನು ಗಣತಿ ಮಾಡಿ ಪುನರ್ವಸತಿ ನೆರವು ನೀಡಬೇಕು. ನಗರದ ಸರ್ವೆ ನಂಬರ್ 1403 ಪುನರ್ವಸತಿ ಕಲ್ಪಿಸಲು ನಿರ್ಮಾಣ ಮಾಡಲಾಗುತ್ತಿರು ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷೆ ಎಚ್ ಪದ್ಮಾ, ಕೆ ಜಿ ವೀರೇಶ, ಮಹಾದೇವಿ, ಜಮಲಮ್ಮ, ಜೆ ತಾಯಮ್ಮ, ಸಂತೋಷಮ್ಮ, ಲಕ್ಕಮ್ಮ ಇದ್ದರು.