ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಸುಮಾರು ಮೂರು ವರ್ಷಗಳಿಂದ ವಿದ್ಯುತ್ ವ್ಯವಸ್ಥೆಯಿಲ್ಲದ ಬುದ್ದಿನ್ನಿ ಸರ್ಕಾರಿ ಪ್ರೌಢಶಾಲೆಗೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.
ಬುದ್ದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೊಠಡಿಗಳು ಕತ್ತಲೆ ಕೋಣೆಗಳಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳು ಡಿಜಿಟಲ್ ತರಗತಿಗಳಿಂದ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ರಾಯಚೂರು | ವಿದ್ಯುತ್ ವ್ಯವಸ್ಥೆಯಿಲ್ಲದೆ ಕತ್ತಲಾದ ಪ್ರೌಢಶಾಲೆ; ಮಕ್ಕಳು ಡಿಜಿಟಲ್ ತರಗತಿಗಳಿಂದ ವಂಚಿತ ಎಂಬ ಶೀರ್ಷಕೆಯಡಿ ವರದಿ ಪ್ರಕಟಿಸಿತ್ತು.
ಈ ದಿನ.ಕಾಮ್ ವರದಿಯ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಕೆಲಸ ಪ್ರಾರಂಭಿಸಿ ಮಕ್ಕಳಿಗೆ ಅನುಕೂಲ ಮಾಡುವುದಕ್ಕೆ ಮುಂದಾಗಿದೆ. ಬುದ್ದಿನ್ನಿ ಗ್ರಾಮದಿಂದ ಸರ್ಕಾರಿ ಪ್ರೌಢಶಾಲೆವರೆಗೆ ಸುಮಾರು 45 ವಿದ್ಯುತ್ ಕಂಬಗಳನ್ನು ಹಾಕುವ ಮೂಲಕ ಶಾಲೆಗೆ ಬೆಳಕು ನೀಡುವುದಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಗ್ರಾಮದ ಮುಖಂಡ ನಾಗರೆಡ್ಡೆಪ್ಪ ದೇವರಮನಿ ಮಾತನಾಡಿ, “ಶಾಲೆಯ ಅಭಿವೃದ್ಧಿ ಕಾಮಗಾರಿಗಾಗಿ ₹20 ಲಕ್ಷ ಅನುದಾನ ಬಿಡುಗಡೆಯಾಗಿದೆಯೆಂದು ಹೇಳಲಾಗಿದೆ. ವಿದ್ಯುತ್ ಇಲ್ಲದೆ ಮಕ್ಕಳು ಡಿಜಿಟಲ್ ಕಲಿಕೆಯಿಂದ ಮಕ್ಕಳು ವಂಚಿತರಾಗಿದ್ದರು. ಇದೀಗ ಶಾಲೆಗೆ ನಿರಂತರ ವಿದ್ಯುತ್ ಜ್ಯೋತಿ ಕರೆಂಟ್ ನೀಡಲಾಗಿದೆ. ನಾವೂ ಡಿಜಿಟಲ್ ಶಿಕ್ಷಣ ಕಲಿತಿಲ್ಲ. ನಮ್ಮ ಮಕ್ಕಳಾದರೂ ಡಿಜಿಟಲ್ ಶಿಕ್ಷಣ ಕಲಿಯಬೇಕೆಂಬ ಗ್ರಾಮಸ್ಥರ ಬೇಡಿಕೆ ಈಡೇರಿದೆ” ಎಂದರು.
“ಜನವರಿ 10ರಂದು ಈ ಶಾಲೆಯ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಗೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಆಗಮಿಸುತ್ತಿದ್ದಾರೆ” ಎಂದು ಹೇಳಿದರು.

